ತಿರುವನಂತಪುರಂ: ಐದು ಜನರ ಕೊಲೆಗ್ಯೆದು ಯುವಕನೊಬ್ಬ ತಪ್ಪೊಪ್ಪಿಕೊಂಡು, ಪೊಲೀಸ್ ಠಾಣೆಗೆ ಹಾಜರಾಗಿ ಪೋಲೀಸರನ್ನೇ ಸ್ಥಂಬೀಭೂತಗೊಳಿಸಿದ ಘಟನೆ ರಾಜಧಾನಿ ನಗರದಲ್ಲಿ ಸಂಜೆ ವರದಿಯಾಗಿದೆ. ಪೆರುಮಾಳ ಮೂಲದ ಅಫಾನ್ (23) ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ಐದು ಜನರನ್ನು ಕೊಂದಿರುವುದಾಗಿ(ಆತ ಹೇಳಿದ್ದು ಆರು ಮಂದಿಯೆಂದು) ಒಪ್ಪಿಕೊಂಡಿದ್ದಾನೆ. ಅವರಲ್ಲಿ ಐದು ಮಂದಿ ಸಾವನ್ನಪ್ಪಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯ ಗೆಳತಿ, ಸಹೋದರ(ತಮ್ಮ), ತಂದೆಯ ಸಹೋದರ ಲತೀಫ್, ಅವರ ಪತ್ನಿ ಶಾಹಿದಾ ಮತ್ತು ತಂದೆಯ ತಾಯಿಯ ಸಾವುಗಳನ್ನು ಪೊಲೀಸರು ದೃಢಪಡಿಸಿದ್ದಾರೆ. ಆರೋಪಿಯ ತಾಯಿ ಶೆಮಿನ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಎಲ್ಲಾ ಕೊಲೆಗಳು ಒಂದೇ ದಿನದಲ್ಲಿ ನಡೆದಿವೆ. ಪೆರುಮಾಳದಲ್ಲಿ ಮೂರು, ಚುಲ್ಲಾಲಂನಲ್ಲಿ ಇಬ್ಬರು ಮತ್ತು ಪಾಂಗೋಡ್‌ನಲ್ಲಿ ಒಬ್ಬರನ್ನು ಕೊಂದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ನಾಲ್ಕು ಮಂದಿಯನ್ನು ಕಡಿದು ಕೊಲ್ಲಲಾಗಿದ್ದರೆ, ಪಾಂಗೋಡ್‌ನಲ್ಲಿ ವಾಸಿಸುವ ಆತನ ತಂದೆಯ ತಾಯಿ 88 ವರ್ಷದ ಅಜ್ಜಿಯನ್ನು ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲ್ಲಲಾಗಿದೆ.ತನಿಖೆ ಪ್ರಗತಿಯಲ್ಲಿದೆ.
ಘಟನಾವಳಿ ಹೀಗೆ:
ಸರ್, ನಾನು ಆರು ಮಂದಿಯನ್ನು ಕೊಂದಿದ್ದೇನೆ...! ವೆಂಜರಮೂಡು ಠಾಣೆಗೆ ಆಗಮಿಸಿದ 23 ವರ್ಷದ ಎ.ಆರ್. ಅಫಾನ್, ಹತ್ಯಾಕಾಂಡದ ಬಗ್ಗೆ ಪೊಲೀಸರಿಗೆ ಹೇಳಿದ್ದು ಇದನ್ನೇ. ಇದನ್ನು ಕೇಳಿದ ಆಘಾತದಿಂದ ಚೇತರಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಕೆಲವು ಕ್ಷಣಗಳು ಬೇಕಾಯಿತು.
23 ರ ಆ ತರುಣ ಮೂರು ಮನೆಗಳಲ್ಲಿ ಆರು ಜನರನ್ನು ಕೊಲೆ ಮಾಡಲು ಯತ್ನಿಸಿದನು. ಇವರಲ್ಲಿ ತಾಯಿ ಮತ್ತು ಕ್ಯಾನ್ಸರ್ ರೋಗಿ ಶಮೀನಾ ಮಾತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಯುವಕ ವಿಷ ಸೇವಿಸಿದ್ದಾನೆ ಎಂದು ತಿಳಿದುಬಂತು.
ಆರೋಪಿ ತನ್ನ ತಂದೆಯೊಂದಿಗೆ ವಿದೇಶದಲ್ಲಿದ್ದನು. ಆತ ವಿಸಿಟಿಂಗ್ ವೀಸಾದಲ್ಲಿ ವಿದೇಶಕ್ಕೆ ಹೋಗಿ ವಾಪಸ್ ದಿನಗಳ ಹಿಂದೆ ಊರಿಗೆ ಮರಳಿದ್ದ ಎನ್ನಲಾಗಿದೆ. ವಿದೇಶದಲ್ಲಿ ಬಿಡಿಭಾಗಗಳ ಅಂಗಡಿಯ ಕುಸಿತದ ದೊಡ್ಡ ಆರ್ಥಿಕ ಹೊರೆಯೇ ಈ ಸಾಮೂಹಿಕ ಹತ್ಯೆಗೆ ಕಾರಣ ಎಂದು ಆರೋಪಿ ಮೊದಲ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ.