ಮಹಾಕುಂಭನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ಮತ್ತು ಬಟ್ಟೆ ಬದಲಿಸಿಕೊಳ್ಳುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದಡಿ ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರು ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕಾಗಿ @neha1224872024 ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮತ್ತು ಮಹಿಳೆಯರ ವಿಡಿಯೊಗಳನ್ನು ಮಾರಾಟ ಮಾಡಿದ ಆರೋಪದಡಿ ಸಿಸಿಟಿವಿ ಚಾನೆಲ್ 11ರ ಟೆಲಿಗ್ರಾಮ್ ಹ್ಯಾಂಡಲ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಿಸಿಕೊಳ್ಳಲು ವಿಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಲಾಗಿದೆ. ಜತೆಗೆ, ಟೆಲಿಗ್ರಾಮ್‌ನಲ್ಲಿ ಪೂರ್ಣ ವಿಡಿಯೊಗಳನ್ನು ಖರೀದಿಸಲು ಬಳಕೆದಾರರನ್ನು ಮನವೊಲಿಸುವ ಸಲುವಾಗಿ ಕೆಲವು ವಿಡಿಯೊಗಳ ತುಣುಕುಗಳನ್ನು ಟೀಸರ್‌ಗಳಾಗಿ ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಟೆಲಿಗ್ರಾಮ್‌ನಲ್ಲಿ ಈ ಗ್ರೂಪ್‌ಗಳಿಗೆ 'ಗಂಗಾ ನದಿ ತೆರೆದ ಸ್ನಾನ' ಮತ್ತು 'ಹಿಡನ್ ಬಾತ್ ವಿಡಿಯೊ ಗ್ರೂಪ್' ಎಂದು ಹೆಸರಿಸಲಾಗಿದೆ. ವರದಿಯ ಪ್ರಕಾರ, ಕಳೆದ ವಾರ ಟೆಲಿಗ್ರಾಮ್‌ನಲ್ಲಿ ಭಾರತದಲ್ಲಿ 'ತೆರೆದ ಸ್ನಾನ' ಎಂಬ ಕೀವರ್ಡ್ ಅನ್ನು ನೆಟ್ಟಿಗರು ಹೆಚ್ಚು ಹುಡುಕಾಟ ನಡೆಸಿದ್ದಾರೆ. ಹಾಗೆಯೇ ಈ ಚಾನಲ್‌ಗಳಿಗೆ ಪ್ರವೇಶ ಪಡೆಯುವ ವೆಚ್ಚವು ₹1,999ರಿಂದ ₹3,000ರಷ್ಟಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಫೇಸ್‌ಬುಕ್‌ನಲ್ಲಿ ಕೆಲವು ಪುಟಗಳು 'ಮಹಾಕುಂಭ ಗಂಗಾ ಸ್ನಾನ ಪ್ರಯಾಗ್‌ರಾಜ್' ಶೀರ್ಷಿಕೆಯೊಂದಿಗೆ #mahakumbh2025, #gangasnan, #prayagrajkumbh ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಅಶ್ಲೀಲ ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾ ಕುಂಭಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿ ಹಂಚಿಕೊಳ್ಳಲಾದ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮಹಾಕುಂಭ ಮತ್ತು ಪ್ರಯಾಗ್‌ರಾಜ್‌ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ 10 ಪ್ರಕರಣಗಳನ್ನು ದಾಖಲಿಸಿಕೊಂಡು 101 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಜನರ ಖಾಸಗಿತನವನ್ನು ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸೈಬರ್ ಘಟಕದ ಪೊಲೀಸರ ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ತಿಳಿಸಿದ್ದಾರೆ.
ಕೆಲವು ವಿಡಿಯೊಗಳು ಕುಂಭ ಮೇಳಕ್ಕೆ ಸಂಬಂಧಿಸಿದವಲ್ಲ. ಆದರೆ ಅವುಗಳನ್ನು ಕುಂಭಮೇಳದ್ದು ಎಂದು ಹೇಳಿ, ಹಣ ಪಡೆದು ಮಾರಾಟ ಮಾಡಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.
ಈ ವಿಡಿಯೊಗಳ ವಿಚಾರವಾಗಿ ವಿರೋಧ ಪಕ್ಷ ಎಸ್‌ಪಿ, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿದೆ. 'ಇದು ಬಹಳ ಸೂಕ್ಷ್ಮವಾದ ವಿಚಾರ. ಭಕ್ತೆಯರ ಖಾಸಗಿತನಕ್ಕೆ ಇದು ಸಂಬಂಧಿಸಿದೆ. ಮಹಿಳೆಯರ ಘನತೆಯನ್ನು ಕಾಪಾಡುವುದು ಸರ್ಕಾರದ ಹೊಣೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.