ಕುಂಬಳೆ: ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಸಮಾಜದ ಆಸ್ತಿಯಾಗಿದ್ದು ಪ್ರತೀ ಹಳ್ಳಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಯ ನಿರ್ವಹಿಸುತ್ತಿವೆ.ಅವುಗಳನ್ನು ಉಳಿಸಿ ಬೆಳೆಸಬೇಕು ಎಂದು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮತ್ ರುಬೀನಾ ಕರೆ ನೀಡಿದರು.
ಅವರು ಹೇರೂರು ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ "ಟ್ಯಾಲೆಂಟ್ ಫೆಸ್ಟ್ 2025"ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಾಗೂ ವಾರ್ಡ್ ಸದಸ್ಯರಾದ ಯೂಸಫ್ ಹೇರೂರು ಅಧ್ಯಕ್ಷತೆ ವಹಿಸಿ ಶಾಲೆಯ ಅಭಿವೃದ್ಧಿಗೆ ತನ್ನಿಂದ ಸಾದ್ಯವಾಗುವ ಸಹಾಯ ನೀಡುವುದಾಗಿ ತಿಳಿಸಿದರು.ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ರಾಜಗೋಪಾಲ ಅವರು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಈ ವರ್ಷ ಸೇವೆಯಿಂದ ನಿವೃತ್ತಿ ಹೊಂದುವ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಮಂಜೇಶ್ವರ ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕ ಜೋಯ್ ಅವರು ಗುಣಮಟ್ಟದ ವಿದ್ಯಾಭ್ಯಾಸ ಹಾಗೂ ರಕ್ಷಕರ ಪಾತ್ರದ ಕುರಿತು ಮಾಹಿತಿ ನೀಡಿದರು. ಶಾಲಾ ಹಳೆ ವಿದ್ಯಾರ್ಥಿ, ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ನಿವೃತ್ತ ಪ್ರಬಂಧಕ ಬಾಲಕೃಷ್ಣ ಶೆಟ್ಟಿ ಅವರು ಶುಭಾಶಂಸನೆ ಗೈದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸಂತೋಷ್ ಕುಮಾರ್,ಮಾತೃ ರಕ್ಷಕ ಸಂಘದ ಫೌಝಿಯಾ ಅವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಿ.ಶ್ರೀಧರ್ ಭಟ್ ಸ್ವಾಗತಿಸಿದರು.ಶಿಕ್ಷಕಿ ಮಧುಶ್ರೀ.ಡಿ ಆರ್ ಶಾಲಾ ವರದಿ ಮಂಡಿಸಿದರು.ಶಿಕ್ಷಕ ಸಾಜನ್ ವಂದಿಸಿದರು. ಶಿಕ್ಷಕಿ ನಾಝಿಯಾ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಆಯಿಷಾಬಿ ಹಾಗೂ ವೈಷ್ಣವಿ ಸಹಕರಿಸಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಅಂಗನವಾಡಿ, ಯುಕೆಜಿ ಹಾಗೂ ಶಾಲಾ ಮಕ್ಕಳಿಂದ ನೃತ್ಯ, ಪ್ರಹಸನ, ಒಪ್ಪನ, ಧಫ್ ಮುಟ್ಟ್ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.