ನಾಗರಕರ್ನೂಲ್: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ ಕಾಮಗಾರಿ ವೇಳೆ ಸುರಂಗದ ಒಂದು ಭಾಗ ಕುಸಿದು ಹಲವು ಕಾರ್ಮಿಕರು ಸಿಲುಕಿದ್ದಾರೆ. ಈ ಬಗ್ಗೆ ಕಾಮಗಾರಿ ಗುತ್ತಿಗೆ ಪಡೆದಿರುವ ಜೈಪೀ ಗ್ರೂಪ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಜೈಪ್ರಕಾಶ ಗೌರ್ ಪ್ರತಿಕ್ರಿಯಿಸಿದ್ದು, ಕಠಿಣ ಕಾಮವೇಳೆ ಅಪಘಾತ ಆಗುವ ಸಂಭವವಿರುತ್ತದೆ ಎಂದಿದ್ದಾರೆ.
ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ಅಪಘಾತ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನದಲ್ಲಿ ಆರರಿಂದ ಏಳು ಅಪಘಾತಗಳನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ.
'ಇಂತಹ ಕಠಿಣ ಕಾಮಗಾರಿ ವೇಳೆ ಅಂತಹ ಅಪಘಾತಗಳು ಸಂಭವಿಸುತ್ತವೆ. ನನ್ನ ಜೀವನದಲ್ಲಿ, ಆರು ಅಥವಾ ಏಳು ಅಪಘಾತಗಳನ್ನು ನೋಡಿದ್ದೇನೆ. ತೆಹ್ರಿ (ಪ್ರಾಜೆಕ್ಟ್), ಭೂತಾನ್, ಜಮ್ಮು ಮತ್ತು ಕಾಶ್ಮಿರ ಸೇರಿ ಹಲವೆಡೆ ಅಪಘಾತ ಸಂಭವಿಸಿವೆ. ನಾವು ಇದನ್ನೆಲ್ಲ ಎದುರಿಸಬೇಕಾಗುತ್ತದೆ'ಎಂದು ಅವರು ಹೇಳಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರಲು ರಕ್ಷಣಾ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಗೌರ್ ಹೇಳಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ಎಂಟು ಜನರಲ್ಲಿ ಇಬ್ಬರು ಎಂಜಿನಿಯರ್‌ಗಳು ಮತ್ತು ನಾಲ್ವರು ಕಾರ್ಮಿಕರು ಜೈಪ್ರಕಾಶ್ ಅಸೋಸಿಯೇಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಫೆಬ್ರುವರಿ 23ರಂದು ಸುರಂಗದ ಒಂದು ಭಾಗ ಕುಸಿದಿದ್ದು, ಕಲ್ಲು, ಮಣ್ಣು 300 ಮೀಟರ್ ಆವರಿಸಿದೆ. ಕುಸಿತ ಮತ್ತು ನೀರಿನ ಶಬ್ದ ಆಲಿಸಿದ ಪಾಳಿಯಲ್ಲಿದ್ದ ಜನರು ಕಾರ್ಮಿಕರನ್ನು ಎಚ್ಚರಿಸಿದ್ದಾರೆ. ಎಲ್ಲರೂ ಓಡಿ ಹೊರಗೆ ಬಂದಿದ್ದಾರೆ. ಬಳಿಕ, ತಲೆ ಎಣಿಕೆ ಮಾಡಿದಾಗ ದುರದೃಷ್ಟವಶಾತ್ ಎಂಟು ಮಂದಿ ಕಾಣೆಯಾಗಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.