ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯುತ್ತಿದ್ದು ದಿನನಿತ್ಯ ಸಹಸ್ರಾರು ಮಂದಿ ಭಗವದ್ಭಕ್ತರು ಹಗಲಿರುಳೆನ್ನದೆ ಪಾಲ್ಗೊಳ್ಳುತ್ತಿದ್ದಾರೆ. ಅಚ್ಚುಕಟ್ಟಾದ ವ್ಯವಸ್ಥೆಯ ದೃಷ್ಟಿಯಿಂದ ಕಾರ್ಯಕರ್ತರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಭೋಜನ ವ್ಯವಸ್ಥೆ :
ಮೂರೂ ಹೊತ್ತು ಆಗಮಿಸಿದ ಭಗವದ್ಭಕ್ತರ ಮನತಣಿಸುವಲ್ಲಿ ಆಹಾರ ಸಮಿತಿಗೆ ಬಲುದೊಡ್ಡ ಜವಾಬ್ದಾರಿಯಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಮುಂದುವರಿಯುತ್ತಿರುವ ತಂಡವು ಹೊತ್ತುಹೊತ್ತಿಗೆ ಆಹಾರವನ್ನು ನೀಡುತ್ತಿರುವುದು ಆಗಮಿಸಿದ ಭಕ್ತರಿಗೆ ಮುದವನ್ನು ನೀಡುತ್ತದೆ. ವಿವಿಧ ಕೌಂಟರ್‍ಗಳಲ್ಲಿ ಆಹಾರವನ್ನು ವಿತರಿಸಲಾಗುತ್ತದೆ. ಮಧ್ಯಾಹ್ನ ಭೋಜನಕ್ಕೆ ಪಲ್ಯ, ಉಪ್ಪಿನಕಾಯಿ, ಸಾರು, ಸಾಂಬಾರು, ಕಾಯಿಹುಳಿ, ಮಜ್ಜಿಗೆ, ಪಾಯಸವನ್ನು ಮಾಡಲಾಗುತ್ತಿದೆ. ತಂಡತಂಡಗಳಾಗಿ ಕಾರ್ಯಕರ್ತರು ತರಕಾರಿಗಳನ್ನು ಸಜ್ಜೀಕರಿಸಿ ನೀಡುತ್ತಿದ್ದಾರೆ. ಪಾಕತಜ್ಞರ ದೊಡ್ಡ ತಂಡವೇ ಹಗಲಿರುಳು ದುಡಿಯುತ್ತದೆ.
ಬಾಯಾರಿಕೆ, ಶುಚೀಕರಣ :
ದೇವಸ್ಥಾನಕ್ಕೆ ಆಗಮಿಸುವ ದಾರಿಯಲ್ಲೇ ಬಾಯಾರಿಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಪಾನಕ, ಬಿಸಿನೀರನ್ನು ನೀಡಿ ಭಗವದ್ಭಕ್ತರನ್ನು ಬರಮಾಡಿಕೊಳ್ಳಲಾಗುತ್ತಿದೆ. ಅದೇರೀತಿ ದಿನನಿತ್ಯ ದೇವಸ್ಥಾನದ ಅಂಗಣ, ಊಟದ ಹಾಲ್ ಹಾಗೂ ಪರಿಸರವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಪ್ರತ್ಯೇಕ ತಂಡಗಳೇ ಕಾರ್ಯನಿರ್ವಹಿಸುತ್ತಿದೆ.