ಮಾಸ್ಕೊ: ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತನಾಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅಮೆರಿಕ ಹಾಗೂ ರಷ್ಯಾ ಅಧ್ಯಕ್ಷರ ನಡುವೆ 2022ರ ಆರಂಭದ ನಂತರದಲ್ಲಿ ನೇರ ಮಾತುಕತೆ ನಡೆದಿರುವುದು ಬಹಿರಂಗ ಆಗಿರುವುದು ಇದೇ ಮೊದಲು.
ಉಕ್ರೇನ್ ಸಮರವನ್ನು ಕೊನೆಗೊಳಿಸುವುದಾಗಿ ಟ್ರಂಪ್ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ಆದರೆ ಅದನ್ನು ಮಾಡುವುದು ಹೇಗೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಏರ್ ಫೋರ್ಸ್ ಒನ್ ವಿಮಾನದಲ್ಲಿ 'ನ್ಯೂಯಾರ್ಕ್ ಪೋಸ್ಟ್'ಗೆ ಸಂದರ್ಶನ ನೀಡಿರುವ ಟ್ರಂಪ್ ಅವರು, 'ಜನ ಸಾಯುವುದು ಕೊನೆಗೊಳ್ಳುವುದನ್ನು ನೋಡಲು ತಾವು ಬಯಸಿರುವುದಾಗಿ ಅವರು (ಪುಟಿನ್) ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.
'ನ್ಯೂಯಾರ್ಕ್ ಪೋಸ್ಟ್'ನ ವರದಿಯನ್ನು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ಖಚಿತಪಡಿಸಿಲ್ಲ, ನಿರಾಕರಿಸಿಯೂ ಇಲ್ಲ.
ಯುದ್ಧ ನಿಲ್ಲಿಸಲು ಪುಟಿನ್ ಭೇಟಿ ಮಾಡುವುದಾಗಿಯೂ ಟ್ರಂಪ್ ಹಲವು ಬಾರಿ ಹೇಳಿದ್ದಾರೆ. ಸೌದಿ ಅರೇಬಿಯಾ ಅಥವಾ ಯುಎಇ ದೇಶದಲ್ಲಿ ಇವರಿಬ್ಬರ ನಡುವಿನ ಭೇಟಿ ನಡೆಯಬಹುದು ಎಂಬುದು ರಷ್ಯಾದ ಲೆಕ್ಕಾಚಾರ.