ಮುಂಬೈ: 'ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳನ್ನು ಕಾನೂನು ರಚನೆಯಿಂದಷ್ಟೇ ತಡೆಯಲು ಸಾಧ್ಯವಿಲ್ಲ. ಅವುಗಳ ಸಮರ್ಪಕ ಅನುಷ್ಠಾನದಿಂದ ಮಾತ್ರ ತಡೆಯಲು ಸಾಧ್ಯ' ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.
ಪುಣೆಯಲ್ಲಿ ಸಾರಿಗೆ ಬಸ್‌ನಲ್ಲಿ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅವರು 2012ರ ನಿರ್ಭಯಾ ಪ್ರಕರಣವನ್ನು ನೆನಪಿಸಿ ಈ ಮಾತು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯದ ಘಟನೆಗಳನ್ನು ತಡೆಗಟ್ಟಲು ರೂಪಿಸಲಾದ ಕಾನೂನುಗಳ ಸರಿಯಾದ ಅನುಷ್ಠಾನದ ಅಗತ್ಯವಿದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಘಟನೆಯ ನಂತರ ಕಾನೂನುಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
'ಕಾನೂನುಗಳಿಂದ ಮಾತ್ರ ನಾವು ಇಂತಹ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ. ಕಾನೂನುಗಳ ಹೊರತಾಗಿ, ಸಮಾಜದ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇಂದು ದುಡಿಯಲು ಮನೆಯಿಂದ ಹೊರ ಹೋಗುತ್ತಿದ್ದಾರೆ. ಅವರು ಸುರಕ್ಷಿತವಾಗಿರಬೇಕು. ಅವರ ಸುರಕ್ಷತೆಯ ಬಗ್ಗೆಯೂ ನಾವು ಎಚ್ಚರಿಕೆಯಿಂದ ಯೋಚಿಸಬೇಕಿದೆ. ಅದು ಸಮಾನತೆಯ ಸಮಾಜದ ಮೂಲಭೂತ ಅಂಶ ಕೂಡ ಹೌದು' ಎಂದು ಅವರು ಹೇಳಿದರು.
'ಇಂತಹ ಘಟನೆಗಳು ನಡೆದಾಗ, ಸರಿಯಾದ ತನಿಖೆ, ಕಠಿಣ ಕ್ರಮ, ತ್ವರಿತ ವಿಚಾರಣೆ ಮತ್ತು ಶಿಕ್ಷೆ ಆಗಬೇಕು. ಇದರಲ್ಲಿ ಕಾನೂನು ವ್ಯವಸ್ಥೆ ಮತ್ತು ಪೊಲೀಸರ ದೊಡ್ಡ ಜವಾಬ್ದಾರಿ ಇದೆ' ಎಂದು ಅವರು ಒತ್ತಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ,
ಪುಣೆಯ ಸ್ವಾರ್ಗೇಟ್ ಪ್ರದೇಶದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನೊಳಗೆ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರದ ಕುರಿತು ಕೇಳಿದ ಪ್ರಶ್ನೆಗೆ ಈ ಮಾತುಗಳನ್ನು ಹೇಳಿದ್ದಾರೆ.
ಮಂಗಳವಾರ ನಸುಕಿನಲ್ಲಿ 26 ವರ್ಷದ ಮಹಿಳೆಯ ಮೇಲೆ ದತ್ತಾತ್ರೇಯ ರಾಮದಾಸ್ ಗಾಡೆ (37) ಎಂಬಾತ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು 13 ತಂಡಗಳನ್ನು ರಚಿಸಿದ್ದಾರೆ.