ಭೋಪಾಲ್: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, 'ಯಮುನಾ ನದಿಗೆ ವಿಷ ಬೆರೆಸಲಾಗಿದೆ' ಎಂಬ ಆರೋಪ ಮಾಡದೇ ಇದ್ದಿದ್ದರೆ, ಅವರ ಪಕ್ಷವು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ 5-7 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಕೇಂದ್ರ ಸಚಿವ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ದೆಹಲಿ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ಅವರು, ಹರಿಯಾಣ ಬಿಜೆಪಿ ಸರ್ಕಾರವು ಯಮುನಾ ನದಿಗೆ ಅಮೋನಿಯಾ ಬೆರೆಸಿದೆ ಎಂದು ಆರೋಪಿಸಿದ್ದರು.
ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಮತದಾನ ನಡೆದಿತ್ತು. ಶನಿವಾರ (ಫೆ.8ರಂದು) ಫಲಿತಾಂಶ ಪ್ರಕಟವಾಗಿದೆ. 2015 ಹಾಗೂ 2020ರಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರ ನಡೆಸಿದ್ದ ಎಎಪಿ ಕೇವಲ 22 ಸ್ಥಾನಗಳಿಗೆ ಕುಸಿದು ಮುಖಭಂಗ ಅನುಭವಿಸಿದೆ. ಕೇಜ್ರಿವಾಲ್ ಅವರೂ ಸೋಲು ಕಂಡಿದ್ದಾರೆ.
70 ಸ್ಥಾನಗಳ ಪೈಕಿ 48ರಲ್ಲಿ ಜಯದ ನಗೆ ಬೀರಿರುವ ಬಿಜೆಪಿ, ಭಾರಿ ಬಹುಮತದೊಂದಿಗೆ ಸರ್ಕಾರ ರಚನೆಗೆ ಸಜ್ಜಾಗಿದೆ.
ಯಮುನಾ ನದಿ ವಿಚಾರವಾಗಿ ಕೇಜ್ರಿವಾಲ್ ಮಾಡಿದ್ದ ಆರೋಪದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಖಟ್ಟರ್, ಹಲವು ರಾಜ್ಯಗಳಲ್ಲಿ ಜಲ ವಿವಾದಗಳಿವೆ. ಆದರೆ, ಕೇಜ್ರಿವಾಲ್ ಅವರು ತಮ್ಮ ಹೊಣೆಯನ್ನು ಪೂರೈಸಲು ಆಗದಿದ್ದಾಗ ಇತರರನ್ನು ದೂರುವ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ವಸತಿ, ನಗರ ವ್ಯವಹಾರ ಮತ್ತು ವಿದ್ಯುತ್ ಸಚಿವರಾಗಿರುವ ಖಟ್ಟರ್, 'ಯಮುನಾ ನದಿಯನ್ನು ಸ್ವಚ್ಛಗೊಳಿಸಲು ತಮಗೆ ಸಾಧ್ಯವಾಗದೇ ಇದ್ದರೆ, 2025ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಜ್ರಿವಾಲ್ ಈ ಹಿಂದೆ ಭರವಸೆ ನೀಡಿದ್ದರು' ಎಂಬುದಾಗಿಯೂ ಸ್ಮರಿಸಿದ್ದಾರೆ.
'ಕೇಜ್ರಿವಾಲ್ ನೀಡಿದ ಹೇಳಿಕೆಯು ಸವಾಲಿನದ್ದು. ಯಮುನಾ ನದಿಯನ್ನು ಸ್ವಚ್ಛಗೊಳಿಸಲು ವಿಫಲವಾದ ಕಾರಣ, ನದಿ ನೀರಿಗೆ ಹರಿಯಾಣದಲ್ಲಿ ವಿಷ ಬೆರೆಸಲಾಗಿದೆ ಎಂದು ದೂರಿದ್ದರು. ಈ ಹೇಳಿಕೆಗೆ ಬೆಲೆ ತೆರಬೇಕಾಯಿತು. ಇಂತಹ ಮಾತು ಆಡದೇ ಇದ್ದಿದ್ದರೆ, ಅವರ ಪಕ್ಷ ಇನ್ನೂ 5-7 ಸ್ಥಾನಗಳನ್ನು ಗೆಲ್ಲುತ್ತಿತ್ತು' ಎಂದು ಪ್ರತಿಪಾದಿಸಿದ್ದಾರೆ.
'ದೆಹಲಿಯಲ್ಲಿರುವ ಶೇ 40ರಷ್ಟು ಜನರು ಹರಿಯಾಣದವರು. ಹಾಗಾಗಿ, ಕೇಜ್ರಿವಾಲ್ ಹೇಳಿಕೆಯು ಹರಿಯಾಣ ಮತ್ತು ದೆಹಲಿ ಜನರನ್ನು ಅವಮಾನಿಸಿತು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಕೇಜ್ರಿವಾಲ್ ಅವರ ಹೇಳಿಕೆ ಬಳಿಕ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು ದೆಹಲಿ ಗಡಿಯಲ್ಲಿ ಯಮುನಾ ನದಿ ನೀರನ್ನು ಕುಡಿದರು' ಎಂದಿದ್ದಾರೆ.
ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಕೇಜ್ರಿವಾಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಸಾಕ್ಷ್ಯ ಕೇಳಿದೆ.