ನಾಗರ್‌ಕರ್ನೂಲ್ : ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಸುರಂಗದೊಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.
ಅದರೆ ದುರಂತ ನಡೆದು ಮೂರು ದಿನಗಳು ಕಳೆದರೂ ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ.
ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡ ದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ಸುರಂಗದ ಚಾವಣಿಯ ಒಂದು ಭಾಗ ಶನಿವಾರ ಕುಸಿದಿತ್ತು.
ಸೇನೆ ಮತ್ತು ಎನ್‌ಡಿಆರ್‌ಎಫ್ ಒಳಗೊಂಡಂತೆ ಹಲವು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಆದರೆ ಸುರಂಗದಿಂದ ಹರಿದು ಬರುತ್ತಿರುವ ಕೆಸರು ಮಿಶ್ರಿತ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ರಕ್ಷಣಾ ತಂಡಗಳಿಗೆ ಸವಾಲಾಗಿ ಪರಿಣಮಿಸಿದೆ. ದೊಡ್ಡ ಯಂತ್ರಗಳನ್ನು ಬಳಸಿದರೆ ಇನ್ನಷ್ಟು ಮಣ್ಣು ಕುಸಿದು ಬೀಳುವ ಆತಂಕ ಎದುರಾಗಿದೆ.
ತಲಾ ಇಬ್ಬರು ಎಂಜಿನಿಯರ್‌ಗಳು ಮತ್ತು ಯಂತ್ರ ಆಪರೇಟರ್‌ಗಳು ಹಾಗೂ ನಾಲ್ವರು ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ಇವರು ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗೂ ಜಾರ್ಖಂಡ್ ರಾಜ್ಯಗಳಿಗೆ ಸೇರಿದವರು.
ತೆಲಂಗಾಣ ಸಾರಿಗೆ ಸಚಿವ ಕೆ.ವೆಂಕಟ ರೆಡ್ಡಿ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ, ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತರುವ ವಿಶ್ವಾಸ ವ್ಯಕ್ತಪಡಿಸಿದರು.
'ಇದು ದುರದೃಷ್ಟಕರ ಘಟನೆ. ಈ ಎಂಟು ಜನರು ಬದುಕಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ. ಕಾರ್ಮಿಕರನ್ನು ರಕ್ಷಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು. ಅವರ ಜೀವಕ್ಕೆ ಯಾವುದೇ ಅಪಾಯವಾಗದಿರಲಿ ಎಂದು ನಾನು ಶ್ರೀಶೈಲ ಮಲ್ಲಣ್ಣ ದೇವರಲ್ಲಿ ಪಾರ್ಥಿಸುತ್ತೇನೆ' ಎಂದು ಹೇಳಿದರು.
ಬದುಕುಳಿದಿರುವ ಸಾಧ್ಯತೆ ಕ್ಷೀಣ:
'ಸುರಂಗದಲ್ಲಿ ಸಿಲುಕಿರುವ ಎಂಟು ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿದ್ದು, ಅವರನ್ನು ತಲುಪಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು' ಎಂದು ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಸೋಮವಾರ ಬೆಳಿಗ್ಗೆ ಹೇಳಿಕೆ ನೀಡಿದ್ದಾರೆ.
'ಜೀವಂತವಾಗಿ ಬರುವ ವಿಶ್ವಾಸ'
'ಸುರಂಗದಲ್ಲಿ ಸಿಲುಕಿರುವ ನಮ್ಮ ಸಹೋದ್ಯೋಗಿಗಳನ್ನು ರಕ್ಷಣಾ ತಂಡದವರು ಸುರಕ್ಷಿತವಾಗಿ ಹೊರತರುವ ವಿಶ್ವಾಸ ಇದೆ. ಅವರನ್ನು ಜೀವಂತವಾಗಿ ನೋಡಬೇಕು ಎಂಬುದೇ ನಮ್ಮ ಬಯಕೆ' ಎಂದು ದುರಂತದಿಂದ ಪಾರಾಗಿ ಬಂದ ಕಾರ್ಮಿಕರಲ್ಲಿ ಒಬ್ಬರಾದ ನಿರ್ಮಲ್ ಸಾಹು ಹೇಳಿದ್ದಾರೆ.
'ಫೆ.22 ರಂದು ಬೆಳಿಗ್ಗೆ ಸುರಂಗದ ಒಳ ಹೋದಾಗ ಚಾವಣಿಯ ಒಂದು ಭಾಗದಿಂದ ನೀರು ಸೋರಲು ಆರಂಭಿಸಿತು. ಸಡಿಲವಾದ ಮಣ್ಣು ಕೂಡಾ ಬೀಳಲು ಶುರುವಾಯಿತು. ಅಪಾಯ ಅರಿತ ನಾವು ತಕ್ಷಣವೇ ಹೊರಗೆ ಓಡಿ ಬಂದೆವು. ಆದರೆ ಎಂಟು ಮಂದಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ' ಎಂದು ನಡೆದ ಘಟನೆಯನ್ನು ವಿವರಿಸಿದರು.