ಇಂಫಾಲ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಈಶಾನ್ಯ ರಾಜ್ಯಗಳ ಉಸ್ತುವಾರಿ, ಬಿಜೆಪಿ ನಾಯಕ ಸಂಬಿತ್ ಪಾತ್ರ, ನಾಗಾ ಪೀಪಲ್ಸ್ ಪಾರ್ಟಿ ಮತ್ತು ಬಿಜೆಪಿ ಪಕ್ಷಗಳ ಒಟ್ಟು 14 ಶಾಸಕರ ಜೊತೆಗೂಡಿ ಬಿರೇನ್ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ನೀಡಿದರು.
'ಇಲ್ಲಿಯವರೆಗೆ ಮಣಿಪುರದ ಜನರ ಸೇವೆ ಸಲ್ಲಿಸಿದ್ದೇನೆ. ಇದು ನನಗೆ ಅತೀವ ಗೌರವದ ವಿಚಾರವಾಗಿದೆ. ಕೇಂದ್ರ ಸರ್ಕಾರಕ್ಕೆ ನಾನು ಋಣಿಯಾಗಿದ್ದೇನೆ. ಮಣಿಪುರ ಜನರ ಹಿತಾಸಕ್ತಿಯನ್ನು ಕಾಪಾಡಲು ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ಕೇಂದ್ರ ಸಹಕಾರ ನೀಡಿದೆ' ಎಂದು ತಮ್ಮ ಪತ್ರದಲ್ಲಿ ಬಿರೇನ್ ಸಿಂಗ್ ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಬಿರೇನ್ ಸಿಂಗ್ ಅವರ ದೆಹಲಿಗೆ ತೆರಳಿ, ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲಿಂದ ವಾಪಸು ಬರುತ್ತಿದ್ದಂತೆಯೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.