ತಿರುವನಂತಪುರ: ಕೇಂದ್ರ ಸರ್ಕಾರದ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವು ಪ್ರಜಾಪ್ರಭುತ್ವವನ್ನು ವ್ಯವಸ್ಥಿತವಾಗಿ ಹಾಳುಗೆಡವುತ್ತದೆ. ಹೀಗಾಗಿ ಅದರ ವಿರುದ್ಧ ಹೋರಾಟ ಮಾಡುವುದು ಜನರ ಜವಾಬ್ದಾರಿ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ.
ಮಾತೃಭೂಮಿತಿ ಅಂತರರಾಷ್ಟ್ರೀಯ ಅಕ್ಷರ ಹಬ್ಬದಲ್ಲಿ ಮಾತನಾಡಿದ ಅವರು, 'ನರೇಂದ್ರ ಮೋದಿಯವರ ಅಜೆಂಡಾ ಒಂದು ಪಕ್ಷ ಒಂದು ಚುನಾವಣೆ ಅಲ್ಲ, ಬದಲಾಗಿ ಒಂದು ಪಕ್ಷ ಒಂದು ವ್ಯಕ್ತಿ ಎಂಬುದಾಗಿದೆ.
ಕೇಂದ್ರ ಸರ್ಕಾರ ನಿಧಾನವಾಗಿ ರಾಜ್ಯದ ಹಕ್ಕುಗಳ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂದು ಅವರು ದೂರಿದರು.
ಚುನಾವಣೆಗಳು ಸ್ಥಳೀಯ ಸಮಸ್ಯೆಗಳ ಮೇಲೆ ನಡೆಯುತ್ತವೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಇದನ್ನು ನಿಭಾಯಿಸುತ್ತವೆ. ಕೇಂದ್ರ ಈ ನಡೆಯನ್ನು ಎಲ್ಲಾ ರಾಜ್ಯಗಳು ವಿರೋಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಜನ ಗಣತಿ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯೂ ದಕ್ಷಿಣದ ರಾಜ್ಯಗಳನ್ನು ಮೂಲೆಗುಂಪು ಮಾಡಲಿಕ್ಕಿರುವ ಇನ್ನೊಂದು ಹೆಜ್ಜೆ ಎಂದು ಅವರು ಹೇಳಿದ್ದಾರೆ.
'ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವುದರಿಂದ ನಾವು ಅದನ್ನು ವಿರೋಧಿಸಬೇಕು. ಕುಟುಂಬ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ್ದಕ್ಕೆ ನಾವ್ಯಾಕೆ ಶಿಕ್ಷೆಗೆ ಒಳಗಾಗಬೇಕು. ಕ್ಷೇತ್ರ ಮರುವಿಂಗಡನೆಯಿಂದಾಗಿ ಈಗಿರುವುದಕ್ಕಿಂತ ಕಡಿಮೆ ಕ್ಷೇತ್ರಗಳು ಉಳಿಯಲಿವೆ' ಎಂದಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಕುಪಲತಿಗಳ ನೇಮಕದ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾಪಿತ ನೀತಿಗಳ ವಿರುದ್ಧವೂ ಕಿಡಿ ಕಾರಿರುವ ಅವರು, 'ರಾಜ್ಯ ಸರ್ಕಾರ ನೆರವು ನೀಡುತ್ತಿರುವ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿರುವುದೇಕೆ' ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಬುದ್ಧಿ ಜೀವಿಗಳು ಧ್ವನಿ ಎತ್ತಬೇಕು ಎಂದು ಭಿನ್ನವಿಸಿದ್ದಾರೆ.