ಇಡುಕ್ಕಿ : ಕೇರಳದ ಮುನ್ನಾರ್‌ನಲ್ಲಿ ಶನಿವಾರ ಪ್ರವಾಸಿಗರ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಮುನ್ನಾರ್-ದೇವಿಕುಳಂ ರಸ್ತೆಯ ಸಿಗ್ನಲ್ ಪಾಯಿಂಟ್‌ನಲ್ಲಿ ಘಟನೆ ಜರುಗಿದ್ದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.
ಆನೆಯು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ, ಮಗುಚಿ ಹಾಕಿದೆ ಎಂದು ನಿವಾಸಿಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಸುದೈವಶಾತ್ ಚಾಲಕ ಸೇರಿ ನಾಲ್ವರು ಪ್ರವಾಸಿಗರು ಯಾವುದೇ ಗಾಯಗಳಿಲ್ಲದೆ ಪವಾಡಸದೃಶರಾಗಿ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆನೆಯನ್ನು ವನ್ಯಜೀವಿ ವಿಭಾಗದ ರಾಪಿಡ್ ರೆಸ್ಪಾನ್ಸ್ ಟೀಮ್ ಕಾಡಿಗೆ ಅಟ್ಟಿದೆ.
'ನಾನು ಕಾರನ್ನು ಹಿಂ ತಿರುಗಿಸಲು ಪ್ರಯತ್ನಿಸಿದೆ, ಆದರೆ ಕೂಡಲೇ ಓಡಿ ಬಂದ ಆನೆ ಕಾರಿನ ಮೇಲೆ ದಾಳಿ ಮಾಡಿತು' ಎಂದು ಚಾಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆನೆ ದಾಳಿಯಿಂದ ಭಯಭೀತರಾದ ಪ್ರವಾಸಿಗರು, ಹಾನಿಗೀಡಾದ ಕಾರಿನ ಬಳಿ ನಡುಗುತ್ತಾ ನಿಂತಿರುವ ದೃಶ್ಯಗನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡಿವೆ. ಆನೆ ದಾಳಿಯಿಂದಾಗಿ ಒಂದು ಬದಿಯ ಡೋರ್‌ಗಳು ಹಾಗೂ ಮಿರರ್‌ಗಳು ಹಾನಿಗೀಡಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
ಪ್ರವಾಸಿಗರು ಮುನ್ನಾರ್‌ನಿಂದ ತೇಕ್ಕಡಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಿ ಪ್ರವಾಸಿಗರು ಎನ್ನುವ ಮಾಹಿತಿ ಇದ್ದು, ಅದು ಖಚಿತವಾಗಿಲ್ಲ. ವಾಹನ ಹಾನಿಗೀಡಾಗಿದ್ದರೂ, ಅದೃಷ್ಠವಶಾತ್ ಪ್ರವಾಸಿಗರಿಗೆ ಗಾಯಗಳಾಗಿಲ್ಲ. ಆನೆಯನ್ನು ಕಾಡಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.