HEALTH TIPS

ರಾಜ್ಯಗಳಲ್ಲಿ ಬಣ ಕಿತ್ತಾಟ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ತಡ

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಣಗಳ ಕಿತ್ತಾಟ ತೀವ್ರಗೊಂಡಿರುವುದ ರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಮೇಲೆ ಪರಿಣಾಮ ಬೀರಿದೆ. ರಾಜ್ಯಗಳ ಬೇಗುದಿ ಶಮನಗೊಂಡ ಬಳಿಕವೇ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಂಭವ ಇದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ 2024ರ ಆರಂಭದಲ್ಲಿ ಪೂರ್ಣಗೊಂಡಿತ್ತು. ಲೋಕಸಭಾ ಚುನಾವಣೆವರೆಗೆ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು. ಬಳಿಕ ಅವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಜನವರಿಯೊಳಗೆ ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂದು ಪಕ್ಷ ಪ್ರಕಟಿಸಿತ್ತು. ರಾಜ್ಯ ಘಟಕಗಳ ಅಧ್ಯಕ್ಷರ ಚುನಾವಣೆಗಾಗಿ ಎರಡು ತಿಂಗಳ ಹಿಂದೆಯೇ ಚುನಾವಣಾ ಉಸ್ತುವಾರಿ ಗಳನ್ನು ನೇಮಿಸಲಾಗಿತ್ತು. ಆದರೆ, ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಪಕ್ಷದ ಸಂವಿಧಾನದ ಪ್ರಕಾರ, ಕನಿಷ್ಠ ಶೇ 50ರಷ್ಟು ರಾಜ್ಯಗಳಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವುದು ಸೇರಿದಂತೆ ಸಾಂಸ್ಥಿಕ ಚುನಾವಣೆಗಳ ನಂತರ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಪಕ್ಷದ ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ಬಂಡಾಯ ಎದ್ದಿದೆ. ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಯತ್ನಾಳ ಅವರಿಗೆ ಕೇಂದ್ರ ಶಿಸ್ತು ಸಮಿತಿ ಎರಡು ನೋಟಿಸ್‌ ನೀಡಿತ್ತು. ಅದಕ್ಕೆ ಯತ್ನಾಳ ಬಗ್ಗಿಲ್ಲ. ವಿಜಯೇಂದ್ರ ವಿರುದ್ಧ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಚುನಾವಣೆ ನಡೆಸಿ ಮೂರು ವರ್ಷಗಳ ಅವಧಿಗೆ ಹೊಸ ಅಧ್ಯಕ್ಷ ರನ್ನು ನೇಮಿಸುವುದೇ ಅಥವಾ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನು ನೇಮಕ ಮಾಡುವುದೇ ಎಂಬುದರ ಬಗ್ಗೆ ವರಿಷ್ಠರು ಗೊಂದಲಕ್ಕೆ ಸಿಲುಕಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದರೆ ಯತ್ನಾಳ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ತೆಲಂಗಾಣದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಬಂಡಿ ಸಂಜಯ್‌ ಕುಮಾರ್ ಅವರನ್ನು ಬದಲಿಸಿ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು 2023ರ ಜುಲೈನಲ್ಲಿ ನೇಮಕ ಮಾಡಲಾಗಿತ್ತು. ಪಕ್ಷಕ್ಕೆ ಆಕ್ರಮಣಕಾರಿ ವ್ಯಕ್ತಿತ್ವದ ನಾಯಕ ಬೇಕು ಎಂದು ಕೆಲವು ನಾಯಕರು ಪಟ್ಟು ಹಿಡಿದಿದ್ದಾರೆ.

'ನಲ್ಗೊಂಡ ಮತ್ತು ಸೂರ್ಯಪೇಟೆಯಂತಹ ಕೆಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ರಾಜ್ಯ ಘಟಕದ ಅಧ್ಯಕ್ಷರಾಗಲು ಹಲವು ಆಕಾಂಕ್ಷಿಗಳಿದ್ದಾರೆ. ರಾಜ್ಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಶೀಘ್ರ ಬಗೆಹರಿಯುವ ವಿಶ್ವಾಸ ಇದೆ' ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

'ಒಬ್ಬ ವ್ಯಕ್ತಿ-ಒಂದು ಹುದ್ದೆ' ಎಂಬ ನೀತಿಗೆ ಪಕ್ಷ ಅಂಟಿಕೊಂಡರೆ ತೆಲಂಗಾಣ ಹಾಗೂ ಗುಜರಾತ್‌ ರಾಜ್ಯ ಘಟಕದ ಅಧ್ಯಕ್ಷರು ಬದಲಾಗಲಿದ್ದಾರೆ. ಜಿ. ಕಿಶನ್‌ ರೆಡ್ಡಿ ಹಾಗೂ ಗುಜರಾತ್‌ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಿ.ಆರ್.ಪಾಟೀಲ ಅವರು ಕೇಂದ್ರ ಸಚಿವರಾಗಿದ್ದಾರೆ.

ಮಧ್ಯ ಪ್ರದೇಶದಲ್ಲಿ ಐದು ವರ್ಷಗಳಿಂದ ವಿ.ಡಿ.ಶರ್ಮಾ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅವರನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ. ಮುಖ್ಯಮಂತ್ರಿ ಮೋಹನ್‌ ಯಾದವ್‌ ಇತರ ಹಿಂದುಳಿದ ವರ್ಗದವರಾಗಿದ್ದು (ಒಬಿಸಿ), ಬ್ರಾಹ್ಮಣ ಅಥವಾ ರಜಪೂತ ಸಮುದಾಯದವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಲು ವರಿಷ್ಠರು ಒಲವು ತೋರಿದ್ದಾರೆ.

ಉತ್ತರ ಪ್ರದೇಶದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ ಪಕ್ಷಕ್ಕೆ ಕಗ್ಗಂಟಾಗಿದೆ. ಸುಮಾರು 15 ಜಿಲ್ಲೆಗಳಲ್ಲಿ ಬಣ ಬಡಿದಾಟದಿಂದಾಗಿ ಪ್ರಕ್ರಿಯೆ ಹಳಿ ತಪ್ಪಿದೆ. ಹೀಗಾಗಿ, ರಾಜ್ಯ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಇನ್ನೂ ಚುನಾವಣೆ ನಡೆದಿಲ್ಲ. ಮಹಾಕುಂಭ ಮೇಳದಿಂದಾಗಿ ಚುನಾವಣಾ ಪ್ರಕ್ರಿಯೆ ತಡವಾಗಿದೆ ಎಂದು ಪಕ್ಷದ ನಾಯಕರು ಸಮಜಾಯಿಷಿ ನೀಡುತ್ತಾರೆ.

'ಪಕ್ಷದ ಸಂವಿಧಾನದ ಪ್ರಕಾರ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಆದರೆ, ಈ ಪ್ರಕ್ರಿಯೆ ಹೆಚ್ಚಾಗಿ ಒಮ್ಮತದ ಮೂಲಕ ನಡೆಯುತ್ತದೆ. ನಾಯಕತ್ವ ಗುಣ, ಜಾತಿ ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗುತ್ತದೆ. ಜತೆಗೆ, ರಾಜ್ಯದ ನಾಯಕರ ಅಭಿಪ್ರಾಯವನ್ನೂ ಕೇಳಲಾಗುತ್ತದೆ. ಕರ್ನಾಟಕದಲ್ಲಿನ ಬಣ ಕಿತ್ತಾಟದ ಸಮಸ್ಯೆ ಸಂಕೀರ್ಣವಾಗಿದೆ. ಎರಡೂ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸೂತ್ರ ಹೆಣೆಯಬೇಕಿದೆ' ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟರು.

ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಅದಕ್ಕೂ ಮುನ್ನ ಪಕ್ಷ ಸಂಘಟನೆಯಲ್ಲಿ ಒಂದಿಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ. ಈ ರಾಜ್ಯಗಳಲ್ಲಿ ಹಾಲಿ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆಯೇ ಅಥವಾ ಹೊಸ ಮುಖಕ್ಕೆ ಮಣೆ ಹಾಕಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಸುಕಾಂತ ಮಜುಂದಾರ್‌ ಮೂರು ವರ್ಷಗಳಿಂದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ತಮಿಳುನಾಡಿನಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು 2021ರ ಜುಲೈನಲ್ಲಿ ಈ ಹುದ್ದೆಗೆ ನೇಮಿಸಲಾಗಿತ್ತು. ಕೇರಳದಲ್ಲಿ ಕೆ. ಸುರೇಂದ್ರನ್‌ ಅವರು ಐದು ವರ್ಷಗಳಿಂದ ಪಕ್ಷದ ಮುಖ್ಯಸ್ಥರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries