ನ್ಯೂಯಾರ್ಕ್: 'ಕೆಲಸದ ಅವಧಿ ಮುಗಿದ ನಂತರ ಅನಧಿಕೃತ ವ್ಯಕ್ತಿಗಳು ಕಚೇರಿಗೆ ಪ್ರವೇಶಿಸುವ ಪ್ರಯತ್ನ ನಡೆಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಿಯಾಟಲ್‌ನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
2014ರಿಂದ 2023ರವರೆಗೆ ಸಿಯಾಟಲ್ ನಗರದ ಕೌನ್ಸಿಲ್ ಸದಸ್ಯೆಯಾಗಿದ್ದ ಕ್ಷಮಾ ಸಾವಂತ್ ವರ್ತನೆಯನ್ನು ಉಲ್ಲೇಖಿಸಿ ಈ ರೀತಿ ತಿಳಿಸಿದೆ.
'ತಿರಸ್ಕರಿಸಿದ ಪಟ್ಟಿ'ಯಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿದ್ದು, ಭಾರತಕ್ಕೆ ಭೇಟಿ ನೀಡಲು ವೀಸಾ ನಿರಾಕರಿಸಲಾಗಿದೆ ಎಂದು ಸಾವಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಯಭಾರ ಕಚೇರಿಯು, 'ಅತಿಕ್ರಮವಾಗಿ ಪ್ರವೇಶಿಸಿದ ಮಹಿಳೆಯು, ಹಲವು ಸಲ ಮನವಿ ಮಾಡಿದರೂ ರಾಯಭಾರ ಕಚೇರಿ ಬಿಟ್ಟು ಹೊರಹೋಗಲು ನಿರಾಕರಿಸಿದರು. ಕಚೇರಿಯ ಸಿಬ್ಬಂದಿ ಜೊತೆಗೆ ಆಕ್ರಮಣಕಾರಿ ಹಾಗೂ ಬೆದರಿಕೆ ವರ್ತನೆ ಪ್ರದರ್ಶಿಸಿದರು. ನಂತರ, ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ, ಪರಿಸ್ಥಿತಿಯನ್ನು ನಿಭಾಯಿಸಲಾಯಿತು' ಎಂದು ತಿಳಿಸಿದೆ.
'ಅತಿಕ್ರಮವಾಗಿ ಪ್ರವೇಶಿಸಿದವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದೂ ಹೇಳಿದೆ.
'ಮೋದಿ ಸರ್ಕಾರದ ನಿರ್ದೇಶನದಂತೆ ನನಗೆ ವೀಸಾ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಸ್ಪಷ್ಟ. ನಾನು ಪ್ರತಿನಿಧಿಸುತ್ತಿದ್ದ ಸಿಟಿ ಕೌನ್ಸಿಲ್ ಸಭೆಯು, ಮೋದಿ ಸರ್ಕಾರದ ಮುಸ್ಲಿಂ ವಿರೋಧಿ, ಬಡವರ ವಿರೋಧಿ, ಸಿಎಎ-ಎನ್‌ಆರ್‌ಸಿ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ಜಾತಿ ತಾರತಮ್ಯ ನಿಷೇಧಿಸಿ, ಐತಿಹಾಸಿಕ ಗೆಲವು ಪಡೆದಿದ್ದೆವು' ಎಂದು ಕ್ಷಮಾ ಸಾವಂತ್ ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.
ಭಾರತೀಯ ಮೂಲದ ಕ್ಷಮಾ ಸಾವಂತ್ ಅವರು ಜಾತಿ ವಿರೋಧಿ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.