ಕಾಸರಗೋಡು: ಕೂಲಿ ಕಾರ್ಮಿಕ ಕುತ್ತಿಕೋಲು ವೆಳ್ಳಾಲ ನಿವಾಸಿ ನಾರಾಯಣ ಎಂಬವರ ಪುತ್ರ ರಾಜೇಶ್(25)ಮೃತದೇಹ ಅತ್ತನಾಡಿ ಸೇತುವೆಯ ಸನಿಹ ಪತ್ತೆಯಾಗಿರುವ ಪ್ರರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಈತನ ಸ್ನೇಹಿತ ಸುರೇಶ್‍ನನ್ನು ಪೋಕ್ಸೋ ಅನ್ವಯ ಪೊಲೀಸರು ಬಂಧಿಸಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ 17ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಈಕೆ ಗರ್ಭಿಣಿಯಾಗಿರುವ ಬಗ್ಗೆ ಸುರೇಶ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ರಾಜೇಶ್ ಸಾವಿಗೆ ಸಂಬಂಧಿಸಿ ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಮಧ್ಯೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪರಿಯಾರಂಗೆ ಮೃತದೇಹ:
ಅತ್ತನಾಡಿ ಸೇತುವೆ ಸನಿಹ ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿರುವ ರಾಜೇಶ್ ಮೃತದೇಹವನ್ನು ಉನ್ನತ ತಪಾಸಣೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿನ ಬಗ್ಗೆ ರಜೇಶ್ ಸಂಬಂಧಿಕರು ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೃತದೇಹ ಉನ್ನತಶವಮಹಜರಿಗಾಗಿ ಪರಿಯಾರಂಗೆ ಕಳುಹಿಸಿಕೊಡಲಾಗಿದೆ.
ಅಡೂರು ನಾಗತ್ತಮೂಲೆಯ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದ ರಾಜೇಶ್ ಫೆ. 22 ರಂದು ಕೆಲಸದ ವೇತನ ಸಿಗಲಿದೆಯೆಂದು ಮನೆಯಿಂದ ಹೊರಟಿದ್ದು, ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ಅಶ್ವತಿ ಆದೂರು ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು. ಹುಡುಕಾಟದ ಮಧ್ಯೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿತ್ತು.