ಖಾನ್ ಯೂನಿಸ್ : ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಬಂಡುಕೋರರು ಮೂವರು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆಗೊಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಇಸ್ರೇಲಿ ಪಡೆಗಳು 369 ಕೈದಿಗಳ ಬಿಡುಗಡೆಗೆ ಪ್ರಕ್ರಿಯೆ ಆರಂಭಿಸಿವೆ.
ಇಸ್ರೇಲ್ ಮತ್ತು ಅರ್ಜೆಂಟೀನಾ ಪ್ರಜೆ ಐಯರ್ ಹಾರ್ನ್ (46), ಅಮೆರಿಕನ್- ಇಸ್ರೇಲಿ ಪ್ರಜೆ ಸಾಗಿ ಡೆಕೆಲ್ ಚೆನ್ (36) ಮತ್ತು ರಷ್ಯನ್-ಇಸ್ರೇಲಿ ಅಲೆಕ್ಸಾಂಡರ್ ಟ್ರೌಫಾನೋವ್ (29) ಅವರನ್ನು ಹಮಾಸ್ ಹಸ್ತಾಂತರಿಸಿದೆ.
'2023ರ ಅಕ್ಟೋಬರ್ 7ರಂದು ಈ ಮೂವರನ್ನು ಕಿಬ್ಜತ್ ನಿರ್ ಓಜ್‌ನಿಂದ ಹಮಾಸ್ ಬಂಡುಕೋರರು ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡಿದ್ದರು. 16 ತಿಂಗಳು ಸೆರೆಯಲ್ಲಿದ್ದ ಮೂವರ ಆರೋಗ್ಯ ಕ್ಷಿಣಿಸಿದಂತೆ ಕಂಡುಬಂದಿತು. ಆದರೆ, ಅವರು ಕಳೆದ ವಾರ ಬಿಡುಗಡೆಯಾಗಿದ್ದ ಮೂವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದರು' ಎಂದು ಮೂಲಗಳು ತಿಳಿಸಿವೆ.
ನಾಲ್ಕು ವಾರಗಳ (ಜ. 19) ಹಿಂದೆ ಕದನ ವಿರಾಮ ಜಾರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯಿಂದ ಪ್ರಚೋದನೆಗಳು ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಅದು ಪುನಃ ಯುದ್ಧದ ಛಾಯೆ ಆವರಿಸುವಂತೆ ಮಾಡಿತ್ತು.
ಗಾಜಾದಿಂದ 20 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ವಿವಾದಾತ್ಮಕ ಪ್ರಸ್ತಾವವು ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಇದು ಕದನ ವಿರಾಮದ ಭವಿಷ್ಯದ ಮೇಲೆ ಅನುಮಾನ ಉಂಟಾಗುವಂತೆ ಮಾಡಿತ್ತು.
ಆದರೆ, ಈಜಿಪ್ಟ್ ಮತ್ತು ಕತಾರ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಮತ್ತಷ್ಟು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಾಗಿ ಹಮಾಸ್ ಗುರುವಾರ ತಿಳಿಸಿತ್ತು.
369 ಪ್ಯಾಲೆಸ್ಟೀನಿಯನ್ ಕೈದಿಗಳು ಮತ್ತು ಬಂಧಿಗಳ ಬಿಡುಗಡೆಗೆ ಇಸ್ರೇಲ್ ಶನಿವಾರ ಕ್ರಮ ತೆಗೆದುಕೊಂಡಿದ್ದು, ಇದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 36 ಕೈದಿಗಳೂ ಸೇರಿದ್ದಾರೆ. ಕದನ ವಿರಾಮ ಜಾರಿಯಾದಾಗಿನಿಂದ 21 ಒತ್ತೆಯಾಳುಗಳು ಮತ್ತು 730 ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆಯಾಗಿದೆ.