ಗುವಾಹಟಿ: ಭಾರತದ ಆಂತರಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ದಾಖಲಿಸಿದ್ದ ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಅವರ ವಿರುದ್ಧ ಅಸ್ಸಾಂ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಶೇಖ್ ಅವರು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರ ಪತ್ನಿ ಎಲಿಜಬೆತ್ ಕೊಲ್‌ಬರ್ನ್ ಅವರ ಮಾಜಿ ಸಹೋದ್ಯೋಗಿ.
ಅಲ್ಲದೆ, ಪಾಕಿಸ್ತಾನದ ಯೋಜನಾ ಆಯೋಗದ ಸಲಹೆಗಾರ ಕೂಡ ಹೌದು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾರತದ ಆಂತರಿಕ ವಿಚಾರಗಳ ಬಗ್ಗೆ ಶೇಕ್ ಅವರ ಅಭಿಪ್ರಾಯಗಳು ಇಲ್ಲಿನ ಕೋಮುಸೌಹಾರ್ದವನ್ನು ಹಾಳು ಮಾಡುವಂತೆ ಮತ್ತು ದೇಶದ ಹಿತಾಸಕ್ತಿಗಳಿಗೆ ಧಕ್ಕೆ ಉಂಟುಮಾಡುವಂತೆ ಇದ್ದವು ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶರ್ಮ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.
ಸಂಸದ ಗೊಗೊಯಿ ಅಥವಾ ಅವರ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಅಸ್ಸಾಂ ಸಚಿವ ಸಂಪುಟವು ಭಾನುವಾರ ತೀರ್ಮಾನಿಸಿತ್ತು. ಶೇಖ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿತ್ತು.
'ಸಂಪುಟದ ಸೂಚನೆಯನ್ನು ಪಡೆದ ನಂತರ ಪ್ರಕರಣ ದಾಖಲಿಸುವಂತೆ ಸಿಐಡಿಗೆ ಹೇಳಲಾಯಿತು. ಸೋಮವಾರ ಬೆಳಿಗ್ಗೆ ಪ್ರಕರಣ ದಾಖಲಿಸಲಾಗಿದೆ' ಎಂದು ಅಸ್ಸಾಂ ಡಿಜಿಪಿ ಹರ್ಮೀತ್ ಸಿಂಗ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಲಿಜಬೆತ್ ಅವರು ಬ್ರಿಟಿಷ್ ಪ್ರಜೆಯಾಗಿದ್ದರೂ ಲೋಕಸಭಾ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಿದ್ದರ ಬಗ್ಗೆ ತನಿಖೆ ನಡೆಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಶರ್ಮ ತಿಳಿಸಿದ್ದರು.
ಸಂಪುಟ ಕೈಗೊಂಡ ತೀರ್ಮಾನವು ಮುಖ್ಯಮಂತ್ರಿ ಶರ್ಮ ಅವರು ಶನಿವಾರ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿದೆ. ಎಲಿಜಬೆತ್ ಅವರು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದನ್ನು (ಎಸ್‌ಐಟಿ) ರಚಿಸಲಾಗುತ್ತದೆ, ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ಶರ್ಮ ಹೇಳಿದ್ದರು.
ಶೇಖ್ ವಿರುದ್ಧದ ಪ್ರಕರಣದ ತನಿಖೆಗೆ ಹರ್ಮೀತ್ ಸಿಂಗ್ ಅವರು ವಿಶೇಷ ತಂಡವನ್ನು (ಎಸ್‌ಐಟಿ) ಸೋಮವಾರ ರಚಿಸಿದ್ದಾರೆ ಎಂದು ಮುಖ್ಯಮಂತ್ರಿ ಶರ್ಮ ತಿಳಿಸಿದ್ದಾರೆ. ಸಿಐಡಿಯ ವಿಶೇಷ ಡಿಜಿಪಿ ಎಂ.ಪಿ. ಗುಪ್ತ ಅವರು ಎಸ್‌ಐಟಿ ಮುಖ್ಯಸ್ಥರಾಗಿರಲಿದ್ದಾರೆ.