ನವದೆಹಲಿ: 'ವರ್ಷವಿಡೀ ಹರಿಯುವ ನಮ್ಮ ನದಿಗಳಿಗೆ ಹಿಮಾಲಯವೇ ಮೂಲಾಧಾರ. ಇಲ್ಲಿನ ನೀರ್ಗಲ್ಲುಗಳನ್ನು ರಕ್ಷಿಸಲು ಕಟಿಬದ್ಧರಾಗದೇ ಇದ್ದರೆ, 144 ವರ್ಷಗಳ ನಂತರ ನಡೆಯುವ ಮುಂದಿನ ಮಹಾಕುಂಭ ಮೇಳವನ್ನು ನಾವು ಮರಳಿನ ಮೇಲೆ ನಡೆಸಬೇಕಾಗುತ್ತದೆ' ಎಂದು ಪರಿಸರವಾದಿ ಲಡಾಖ್‌ನ ಸೋಮನ್ ವಾಂಗ್ಚುಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಾಂಗ್ಚುಕ್ ಅವರು ದೆಹಲಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾಂಗ್ಚುಕ್ ಅವರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಹಿರಂಗ ಪತ್ರವನ್ನೂ ಬರೆದಿದ್ದಾರೆ.
''ಜಗತ್ತಿನಲ್ಲಿ ನಾನು ಎಲ್ಲೇ ಹೋದರೂ ಪ್ರಧಾನಿ ಮೋದಿ ಅವರ 'ಮಿಷನ್ ಲೈಫ್' ಯೋಜನೆಯ ಬಗ್ಗೆ ಪ್ರಸ್ತಾಪಿಸುತ್ತೇನೆ. ಈ ಯೋಜನೆಯು ಜಗತ್ತಿಗೆ ಭಾರತ ನೀಡುತ್ತಿರುವ ಕೊಡುಗೆ ಎಂದೇ ಹೇಳುತ್ತೇನೆ'' -ಸೋನಮ್ ವಾಂಗ್ಚುಕ್ ಪರಿಸರವಾದಿ
ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ?
* ಹಿಮಾಲಯದ ನೀರ್ಗಲ್ಲುಗಳನ್ನು ರಕ್ಷಿಸಲು ಆಯೋಗವೊಂದನ್ನು ಸ್ಥಾಪಿಸಿ. ಯಾಕೆಂದರೆ ಇದೇ ಪ್ರಮಾಣದಲ್ಲಿ ನಮ್ಮ ಹಿಮಾಲಯವು ಕರಗುತ್ತಾ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಗಂಗೆ ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳು ಮಳೆಗಾಲದಲ್ಲಿ ಮಾತ್ರವೇ ಹರಿಯುವಂಥ ನದಿಗಳಾಗುತ್ತವೆ * ಗಂಗೋತ್ರಿ ಹಾಗೂ ಯಮುನೋತ್ರಿ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ. ಇದನ್ನು ರಕ್ಷಿಸಲು ವಿಶೇಷ ನೀತಿಗಳನ್ನು ರೂಪಿಸಿ * ಆರ್ಕ್ಟ್‌ಟಿಕ್ ಮತ್ತು ಅಂಟಾರ್ಟಿಕಾ ನಂತರ ಜಗತ್ತಿನಲ್ಲೇ ಅತಿ ಹೆಚ್ಚು ಮಂಜಿನ ಹಾಸು ಹಿಮಾಲಯದಲ್ಲಿದೆ. ಇದಕ್ಕಾಗಿ ಹಿಮಾಲಯವನ್ನು 'ಮೂರನೇ ಧ್ರುವ' ಎನ್ನಲಾಗುತ್ತದೆ. ಜೊತೆಗೆ ನಮ್ಮ ಪವಿತ್ರ ಗಂಗೆ ಹಾಗೂ ಯಮುನಾ ನದಿಗಳ ಹುಟ್ಟು ಹಿಮಾಲಯದಲ್ಲಿ ಆಗುತ್ತದೆ. ಇದೇ ಕಾರಣಕ್ಕೆ ನೀರ್ಗಲ್ಲುಗಳನ್ನು ರಕ್ಷಿಸುವ ಕಾರ್ಯಾಚರಣೆಯ ನೇತೃತ್ವವನ್ನು ಭಾರತ ವಹಿಸಿಕೊಳ್ಳಬೇಕು
ಲಡಾಖ್‌ನಿಂದ ನ್ಯೂಯಾರ್ಕ್ ತಲುಪಿದ ಮಂಜುಗಡ್ಡೆ
ಹಿಮಾಲಯದಲ್ಲಿನ ನೀರ್ಗಲ್ಲುಗಳು ಕರಗುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಸೋನಮ್ ವಾಂಗ್ಚುಕ್ ಅವರು ವಿಶಿಷ್ಟ ಪ್ರಯತ್ನವೊಂದನ್ನು ಮಾಡಿದ್ದಾರೆ. ಲೇಹ್‌ನಲ್ಲಿರುವ ಜಗತ್ತಿನ ಅತಿ ಎತ್ತರದ (5359 ಮೀಟರ್) ಕಾರ್ದುಂಗ್ ಲಾ ಬೆಟ್ಟದಿಂದ ಬಹಳ ಪ್ರಯಾಸಪಟ್ಟು ನೀರ್ಗಲ್ಲಿನ ಮಂಜುಗಡ್ಡೆಯ ತುಂಡನ್ನು ವಿಶ್ವಸಂಸ್ಥೆಯ ಕೇಂದ್ರ ಕಚೇರಿವರೆಗೂ ಕೊಂಡೊಯ್ದಿದ್ದಾರೆ. ಮಂಜುಗಡ್ಡೆಯು ಕರಗದಂತೆ ಡಬ್ಬವೊಂದರಲ್ಲಿ ಇಡಲಾಗಿತ್ತು. ಈ ಡಬ್ಬಕ್ಕೆ ಲಡಾಖ್‌ನ ಪಶ್ಮೀನಾ ಉಣ್ಣೆಯನ್ನು ಸುತ್ತಲಾಗಿತ್ತು. 'ಈ ಮಂಜುಗಡ್ಡೆಯು ಜಗತ್ತಿನ ನಾಲ್ಕನೇ ಒಂದು ಭಾಗದಷ್ಟು ಪ್ರದೇಶವನ್ನು ಸುತ್ತಿದೆ. ಲಡಾಖ್‌ನಿಂದ ಮೊದಲು ದೆಹಲಿಯ ವಿಶ್ವಸಂಸ್ಥೆಯ ಕಚೇರಿಗೆ ತಲುಪಿತು. ಅಲ್ಲಿಂದ ಅಮೆರಿಕಕ್ಕೆ ಪ್ರಯಾಣಿಸಿತು. ಅಲ್ಲಿ ಬಾಸ್ಟನ್‌ನ ಹಾರ್ವಡ್ ಕೆನಡಿ ಸ್ಕೂಲ್ ತಲುಪಿತು. ಅಲ್ಲಿಂದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಸೇರಿತು. ಬಳಿಕ ನ್ಯೂಯಾರ್ಕ್‌ನಲ್ಲಿರುವ ಹಡ್ಸನ್ ನದಿ ಮತ್ತು ಈಸ್ಟ್ ನದಿಗಳಲ್ಲಿ ಫೆ.21ರಂದು ಹಿಮಾಲಯದ ನೀರ್ಗಲ್ಲು ಲೀನವಾಯಿತು' ಎಂದು ವಾಂಗ್ಚುಕ್ ಮಾಹಿತಿ ನೀಡಿದರು.
ಮಾ.21 'ವಿಶ್ವ ನೀರ್ಗಲ್ಲು ದಿನ'
ಮಾರ್ಚ್ 21 ಅನ್ನು 'ವಿಶ್ವ ನೀರ್ಗಲ್ಲು ದಿನ'ವನ್ನಾಗಿ ಆಚರಿಸಲು ವಿಶ್ವ ಸಂಸ್ಥೆ ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಮಾ.21ರಂದು 'ವಿಶ್ವ ನೀರ್ಗಲ್ಲು ದಿನ'ವನ್ನು ಆಚರಿಸಲಾಗುತ್ತಿದ್ದು ಇದಕ್ಕಾಗಿ 20 ಮತ್ತು 21ರಂದು ಪ್ಯಾರಿಸ್‌ನಲ್ಲಿರುವ ಯುನೆಸ್ಕೊ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ 2025ನೇ ವರ್ಷವನ್ನು 'ಅಂತರರಾಷ್ಟ್ರೀಯ ನೀರ್ಗಲ್ಲು ಸಂರಕ್ಷಣಾ ವರ್ಷ'ವನ್ನಾಗಿ ವಿಶ್ವ ಸಂಸ್ಥೆ ಘೋಷಿಸಿದೆ.