ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧವು ಶೀಘ್ರವೇ ಅಂತ್ಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರನ್ನು ಸೋಮವಾರ ಭೇಟಿಯಾದ ಸಂದರ್ಭದಲ್ಲಿ ಅವರು ಈ ರೀತಿ ವಿಶ್ವಾಸ ವ್ಯಕ್ತಪಡಿಸಿದರು.
ಟ್ರಂಪ್ ಅವರ 'ಅಮೆರಿಕ ಮೊದಲು' ನೀತಿಯ ಪರಿಣಾಮವಾಗಿ ಅಟ್ಲಾಂಟಿಕ್ ಸಾಗರದ ಎರಡೂ ಬದಿಗಳಲ್ಲಿರುವ ದೇಶಗಳ ನಡುವಿನ ಸಂಬಂಧದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡಿರುವ ಸಂದರ್ಭದಲ್ಲಿಯೇ ಮ್ಯಾಕ್ರನ್ ಮತ್ತು ಟ್ರಂಪ್ ಅವರ ಮಧ್ಯೆ ಮಾತುಕತೆ ನಡೆದಿದೆ.
'ಉಕ್ರೇನ್ ಮೇಲಿನ ಆಕ್ರಮಣಕ್ಕೆ ಅಂತ್ಯ ಹಾಡುವ ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಒಪ್ಪಿಗೆ ಸೂಚಿಸಲಿದ್ದಾರೆ ಎಂದು ಭಾವಿಸುತ್ತೇನೆ. ಈ ಬಗ್ಗೆ ನಾನು ಅವರನ್ನು ಪ್ರಶ್ನಿಸಿದ್ದೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಮ್ಯಾಕ್ರನ್ ಅವರು, 'ರಷ್ಯಾದೊಂದಿಗಿನ ಯಾವುದೇ ಒಪ್ಪಂದವು ಉಕ್ರೇನ್ ದೇಶವನ್ನು ಶರಣಾಗುವಂತೆ ಮಾಡುವಂತಿರಬಾರದು' ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ರಷ್ಯಾ-ಉಕ್ರೇನ್ ನಡುವಣ ಯುದ್ಧವು ಕೆಲವೇ ವಾರಗಳ ಒಳಗಾಗಿ ಅಂತ್ಯಗೊಳ್ಳಲಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಶೀಘ್ರವೇ ಅಮೆರಿಕಕ್ಕೆ ಬರಲಿದ್ದಾರೆ ಮತ್ತು ಉಕ್ರೇನ್‌ನ ಖನಿಜ ಸಂಪನ್ಮೂಲಗಳನ್ನು ಅಮೆರಿಕ ಬಳಸಿಕೊಳ್ಳಲು ಅವಕಾಶ ನೀಡುವ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ' ಎಂದು ಹೇಳಿದರು.
ರಷ್ಯಾ ದೂಷಿಸಲು ಅಮೆರಿಕ ನಿರಾಕರಣೆ
ಉಕ್ರೇನ್ ಮೇಲಿನ ಆಕ್ರಮಣ ವಿಚಾರವಾಗಿ ರಷ್ಯಾವನ್ನು ದೂಷಿಸಲು ಅಮೆರಿಕ ಸೋಮವಾರ ನಿರಾಕರಿಸಿತು. ರಷ್ಯಾ-ಉಕ್ರೇನ್ ನಡುವಣ ಯುದ್ಧ ಅಂತ್ಯಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಸೋಮವಾರ ಮೂರು ನಿರ್ಣಯಗಳನ್ನು ಮಂಡಿಸಿತು. ಈ ಸಂದರ್ಭದಲ್ಲಿ 'ರಷ್ಯಾ ಪಡೆಗಳನ್ನು ಉಕ್ರೇನ್‌ನಿಂದ ಕೂಡಲೇ ಹಿಂಪಡೆಯಬೇಕು' ಎಂಬ ನಿರ್ಣಯ ವಿಚಾರವಾಗಿ ಅಮೆರಿಕವು ರಷ್ಯಾ ಪರವಾಗಿ ಮತ್ತು ಉಕ್ರೇನ್ ವಿರುದ್ಧವಾಗಿ ಮತ ಚಲಾಯಿಸಿತು.