ನವದೆಹಲಿ: ವಿದೇಶದ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆಯಬೇಕು ಎಂದಾದರೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಉತ್ತೀರ್ಣ ಆಗಬೇಕು ಎಂದು ಭಾರತೀಯ ವೈದ್ಯಕೀಯ ಪರಿಷತ್ತು ರೂಪಿಸಿರುವ ನಿಯಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನಿಯಮಗಳು ಸಂವಿಧಾನದ ವ್ಯಾಪ್ತಿಯನ್ನು ಮೀರಿಲ್ಲ, ಭಾರತೀಯ ವೈದ್ಯಕೀಯ ಪರಿಷತ್ತು ಕಾಯ್ದೆ - 1956ರ ಯಾವುದೇ ಅಂಶಗಳಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ. ವಿನೋದ್ ಚಂದ್ರನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ವಿದೇಶಗಳಲ್ಲಿ ಎಂಬಿಬಿಎಸ್ ಓದಿದ ವಿದ್ಯಾರ್ಥಿಗಳು ಭಾರತದಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಲು ಬಯಸುವುದಾದರೆ ಅವರು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂಬ ನಿಯಮವು 2018ರಿಂದ ಜಾರಿಯಲ್ಲಿದೆ.
ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದು ಕಡ್ಡಾಯ ಎಂಬ ನಿಯಮವನ್ನು 2018ರಲ್ಲಿ ಶಾಸನಕ್ಕೆ ತಿದ್ದುಪಡಿ ತರದೆಯೇ ಜಾರಿಗೊಳಿಸಲಾಯಿತು ಎಂದು ಅರ್ಜಿದಾರರಾದ ಅರುಣಾದಿತ್ಯ ದುಬೆ ಅವರು ದೂರಿದ್ದರು. ಹೀಗಾಗಿ, ನೀಟ್ ಉತ್ತೀರ್ಣ ಕಡ್ಡಾಯ ಎಂಬ ನಿಯಮನ್ನು ಬಲವಂತದಿಂದ ಜಾರಿಗೊಳಿಸಬಾರದು ಎಂದು ಅವರು ಕೋರಿದ್ದರು.