ಭುವನೇಶ್ವರ (PTI): 'ಪುರಿ ಜಗನ್ನಾಥ ದೇವಸ್ಥಾನದ 'ರತ್ನ ಭಂಡಾರ'ದ ಬೆಲೆಬಾಳುವ ವಸ್ತುಗಳ ಯಾದಿ ಸಿದ್ಧಪಡಿಸುವ ಕಾರ್ಯವನ್ನು ಅಲ್ಲಿನ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ನಡೆಸಲಾಗುವುದು' ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ತಿಳಿಸಿದರು.
ವಿಧಾನಸಭೆಯಲ್ಲಿ ಈ ಕುರಿತು ಪ್ರಶ್ನೆಯೊಂದಕ್ಕೆ ಲಿಖಿತ ಹೇಳಿಕೆ ನೀಡಿದ್ದು, 'ಸರ್ಕಾರದ ನಿಯಮಗಳ ಅನುಸಾರ 2024ರ ಜುಲೈ 14ರಂದು ರತ್ನ ಭಂಡಾರ ತೆರೆಯಲಾಗಿತ್ತು.
ಆಭರಣಗಳ ಸ್ಥಳಾಂತರದ ಬಳಿಕ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆದಿದೆ' ಎಂದರು.
ರತ್ನಭಂಡಾರದ ಬೆಲೆಬಾಳುವ ವಸ್ತುಗಳ ಪಟ್ಟಿಯನ್ನು ತಯಾರಿಸುವ ಕಾರ್ಯ ಈ ಹಿಂದೆ 1978ರ ಮೇ 13ರಿಂದ ಜುಲೈ 23ರವರೆಗೂ ನಡೆದಿತ್ತು ಎಂದು ಅವರು ತಿಳಿಸಿದರು.
ಮತ್ತೊಂದು ಹೇಳಿಕೆಯಲ್ಲಿ ಅಂಕಿಅಂಶದ ಪ್ರಕಾರ, 'ದೇವಸ್ಥಾನದ ಸುಪರ್ದಿಯಲ್ಲಿ 60,426.943 ಎಕರೆ ಭೂಮಿ ಇದ್ದು, ಇದು 24 ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಇವುಗಳ ಪೈಕಿ 38,061.892 ಎಕರೆ ಭೂಮಿಗೆ ಸಂಬಂಧಿಸಿದಂತೆ ಹಕ್ಕುಪತ್ರಗಳಿವೆ' ಎಂದು ಮಾಹಿತಿ ನೀಡಿದರು.