ನವದೆಹಲಿ: ಕೋವಿಡ್-19 ಸಾಂಕ್ರಾಮಿಕತೆಯ ನಂತರದಲ್ಲಿ ಜಾಗತಿಕವಾಗಿ ಯುವ ವಯಸ್ಕರ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅಮೆರಿಕದ ಅಧ್ಯಯನ ವರದಿಯೊಂದು ಹೇಳಿದೆ. ಈಗಲೂ ಮುಂದುವರಿದಿರುವ ಕೋವಿಡ್ ಸಾಂಕ್ರಾಮಿಕತೆಯ ಪರಿಣಾಮಗಳ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ (ಜೆಎಎಂಎ) ನೆಟ್ವರ್ಕ್ ಓಪನ್ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.
33 ಲಕ್ಷ ಸಾವಿನ ವಿಶ್ಲೇಷಣೆ: ಅಮೆರಿಕದ ಯುವ ವಯಸ್ಕರಲ್ಲಿ (25ರಿಂದ 44 ವರ್ಷ ಪ್ರಾಯದವರು) 1999ರಿಂದ 2023ರ ವರೆಗೆ ಸಂಭವಿಸಿದ 33 ಲಕ್ಷಕ್ಕೂ ಅಧಿಕ ಸಾವನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಮಿನ್ನಸೋಟಾ ವಿಶ್ವವಿದ್ಯಾಲಯಸಹಿತ ಅನೇಕ ಸಂಸ್ಥೆಗಳ ಸಂಶೋಧಕರು ಅಧ್ಯಯನದಲ್ಲಿ ಭಾಗವಹಿಸಿದ್ದರು.
ಸಾಂಕ್ರಾಮಿಕತೆಯ ಅವಧಿಯಲ್ಲಿ ಸಾವಿನ ದರ ತೀವ್ರವಾಗಿ ಏರಿದ್ದು ಸಾಂಕ್ರಾಮಿಕೋತ್ತರದಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿಯೇ ಉಳಿದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇತರ ಕಾರಣಗಳು: ಕಾರ್ಡಿಯೋಮೆಟಾಬಾಲಿಕ್ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಕಾರಣಗಳಸಹಿತ ಇನ್ನೂ ಹಲವು ನೈಸರ್ಗಿಕ ಕಾರಣಗಳು ಕೂಡ ಅಧಿಕ ಸಾವಿಗೆ ಕೊಡುಗೆ ನೀಡಿವೆ. ಅಪಘಾತಗಳ ಸಹಿತ ಇತರ ಕೆಲವು ಬಾಹ್ಯ ಅಂಶಗಳೂ ಕಾರಣವಾಗಿವೆ ಎಂದು ಬಾಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ಜಾಗತಿಕ ಆರೋಗ್ಯದ ಸಹ ಪ್ರಾಧ್ಯಾಪಕ ಆಂಡ್ರ್ಯೂ ಸ್ಟೋಕ್ಸ್ ಹೇಳಿದ್ದಾರೆ.