ಹೈದರಾಬಾದ್: ಈ ವರ್ಷ ನಡೆಯಲಿರುವ 72ನೇ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ತೆಲಂಗಾಣ ರಾಜ್ಯ ವಹಿಸಿಕೊಂಡಿದೆ.
ಮೇ 7ರಿಂದ ಮೇ 31ರ ಅವಧಿಯಲ್ಲಿ ರಾಜ್ಯದ ವಿವಿಧೆಡೆ ವಿಶ್ವ ಸುಂದರಿ ಸ್ಪರ್ಧೆಯು ವಿವಿಧ ಹಂತಗಳಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ಸ್ಪರ್ಧೆಯ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ನಿಗದಿಯಾಗಿವೆ.
ಮೇ 31ರಂದು ವಿಶ್ವ ಸುಂದರಿ ಕಿರೀಟ ಯಾರಿಗೆ ಎನ್ನುವುದು ಗೊತ್ತಾಗಲಿದೆ.
ಮಿಸ್ ವರ್ಲ್ಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೂಲಿಯಾ ಮೋರ್ಲಿ ಹಾಗೂ ತೆಲಂಗಾಣ ಪ್ರವಾಸೋದ್ಯಮ ಕಾರ್ಯದರ್ಶಿ ಸ್ಮಿತಾ ಸಭರ್‌ವಾಲ್ ಬುಧವಾರ ಜಂಟಿಯಾಗಿ ಸ್ಪರ್ಧೆಯನ್ನು ಅಧಿಕೃತವಾಗಿ ಪ್ರಕಟಿಸಿದರು.
120 ದೇಶಗಳಿಂದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 7ರಂದು ಸೌಂದರ್ಯವತಿಯರು ಬರಲಿದ್ದಾರೆ.
ಸಂಸ್ಕೃತಿ, ಅನ್ವೇಷಣೆ ಹಾಗೂ ಹೊಸತನವನ್ನು ಪರಂಪರೆಯ ಜೊತೆಗೆ ಮಿಳಿತಗೊಳಿಸಿಕೊಂಡ ತೆಲಂಗಾಣ ರಾಜ್ಯದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸಲು ಸಂತಸವಾಗುತ್ತಿದೆ. ಸಮುದಾಯಗಳನ್ನು ಸೌಂದರ್ಯ ಸ್ಪರ್ಧೆಯ ನೆಪದಲ್ಲಿ ಒಗ್ಗೂಡಿಸುವ ಪ್ರಯತ್ನ ಇದಾಗಿದೆ ಎಂದು ಜ್ಯೂಲಿಯಾ ಮೋರ್ಲಿ ಹೇಳಿದರು.
'ಕೌಶಲ ಹಾಗೂ ಬದ್ಧತೆಯನ್ನು ಮೊದಲಿನಿಂದಲೂ ಬಿಂಬಿಸುತ್ತಾ ಬಂದಿರುವ ತೆಲಂಗಾಣದಲ್ಲಿ ಎಲ್ಲ ಹಬ್ಬಗಳೂ ಬಣ್ಣಗಟ್ಟುತ್ತವೆ. ವಿಶ್ವ ಸುಂದರಿ ಸ್ಪರ್ಧೆಯನ್ನು ನಾವು ಸ್ವಾಗತಿಸುತ್ತೇವೆ' ಎಂದು ಸ್ಮಿತಾ ಸಭರ್‌ವಾಲ್ ಹರ್ಷ ವ್ಯಕ್ತಪಡಿಸಿದರು.