ಮುಳ್ಳೇರಿಯ: ಬೇಡಡ್ಕ ಸನಿಹದ ಕೊಳತ್ತೂರಿನಲ್ಲಿ ಬೋನಿನೊಳಗೆ ಸಿಲುಕಿಕೊಂಡ ಚಿರತೆಯನ್ನು ಬೆಳ್ಳೂರು ಪಂಚಯಿತಿ ವ್ಯಾಪ್ತಿಯಲ್ಲಿ ತೆರೆದುಬಿಟ್ಟಿರುವುದಾಗಿ ಸಂಶಯಿಸಲಾಗಿದ್ದು, ಈ ನಿಟ್ಟಿನಲ್ಲಿ ಊರವರು ಪ್ರತಿಭಟನೆಗಿಳಿದಿದ್ದಾರೆ.
ಬೇಡಡ್ಕ ಕೊಳತ್ತೂರು ಸನಿಹದ ನಿಡುವೋಟ್ ನಿವಾಸಿ ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರನ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿನೊಳಗೆ ಚಿರತೆ ಸಿಲುಕಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆಯನ್ನು ವಾಹನದಲ್ಲಿ ಕೊಂಡೊಯ್ದು ದೂರದ ಕಾಡಿಗೆ ಬಿಟ್ಟಿರುವುದಾಗಿ ತಿಳಿಸಿದ್ದರು. ಈ ವಾಹನ ಬೆಳ್ಳೂರು, ಕಿನ್ನಿಂಗಾರು ಹಾದಿಯಾಗಿ ಕುಳದಪಾರೆಗೆ ಸಂಚರಿಸಿರುವುದು ಅಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ ಪತ್ತೆಯಾಗಿದ್ದು, ಇದರಿಂದ ಚಿರತೆಯನ್ನು ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯಲ್ಲೇ ಕಾಡಿನೊಳಗೆ ಬಿಟ್ಟಿರಬೇಕೆಂದು ಸಂಶಯಿಸಲಾಗಿದೆ. ಬೆಳ್ಳೂರು ವ್ಯಾಪ್ತಿಯಲ್ಲಿ ಚಿರತೆಯನ್ನು ಬಿಟ್ಟಿರುವ ವದಂತಿ ಹಿನ್ನೆಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಜನತೆ ಆತಂಕಕ್ಕೀಡಾಗಿದ್ದಾರೆ.
ಶಾಸಕರು-ಜನಪ್ರತಿನಿಧೀಗಳಿಂದ ಪ್ರತಿಭಟನೆ:
ಚಿರತೆಯನ್ನು ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ಬಂಟಾಜೆ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವುದು ಖಚಿತವಾಘುತ್ತಿದ್ದಂತೆ ಶಾಸಕ ಎನ್.ಎ ನೆಲ್ಲಿಕುನ್ನು, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ, ಬೆಳ್ಳುರು ಗ್ರಾಪಂ ಅಧ್ಯಕ್ಷ ಶ್ರೀಧರ ಸೇರಿದಂತೆ ಜನಪ್ರತಿನಿಧಿಗಳು ಕಾಸರಗೋಡಿನ ಅರಣ್ಯಾಧೀಕಾರಿ ಕಚೇರಿಗೆ ತೆರಳಿ ಈ ಬಗ್ಗೆ ಅಗತ್ಯ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೊಳತ್ತೂರಿನಿಂದ ಸೆರೆಹಿಡಿದ ಚಿರತೆಯನ್ನು ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಟ್ಟಿರುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಪ.ವರ್ಗ-ಪ.ಜಾತಿ ಸಮುದಾಯ ಸೇರಿದಂತೆ ಹೆಚ್ಚಿನ ಜನವಾಸವಿರುವ ಈ ಪ್ರದೇಶದಲ್ಲಿ ಚಿರತೆಯನ್ನು ಬಿಟ್ಟಿರುವ ಅರಣ್ಯ ಇಲಾಖೆಯ ಕ್ರಮ ಖಂಡನೀಯ ಎಂದು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಜನರ ಪ್ರತಿಭಟನೆಗೆ ಮಣಿದ ಅರಣ್ಯಾಧಿಕಾರಿ ತಕ್ಷಣ ಆರು ಮಂದಿಯನ್ನೊಳಗೊಂಡ ಶಸ್ತ್ರಸಜ್ಜಿತ ಪಡೆಯನ್ನು ಸ್ಥಳಕ್ಕೆ ರವಾನಿಸಿದ್ದಾರೆ.