ಲಖನೌ: ಶ್ರೀರಾಮನ ಜನ್ಮಸ್ಥಳ ಆಯೋಧ್ಯೆ ಈಗಾಗಲೇ ಅತೀ ದೊಡ್ಡ ಜಾಗತಿಕ ಧಾರ್ಮಿಕ ಕ್ಷೇತ್ರವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ರಾಜ್ಯದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ತನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯಾನಾಥ್ ಅವರು, 'ರಾಜ್ಯದಲ್ಲಿ ಹಿಂದೂ ಧಾರ್ಮಿಕ ತಾಣಗಳಿಗೆ ಅಭೂತಪೂರ್ವವಾಗಿ ಯಾತ್ರಾರ್ಥಿಗಳ ಹರಿವು ಕಂಡುಬಂದಿದೆ.
ಮೆಕ್ಕಾ ಮತ್ತು ವ್ಯಾಟಿಕನ್ ನಗರದಲ್ಲಿನ ಜಾಗತಿಕ ಧಾರ್ಮಿಕ ಸಭೆಗಳಲ್ಲಿ ನಡೆಯುವ ಯಾತ್ರಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರೆ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಆಯೋಧ್ಯೆ ಮತ್ತು ಇತರೆ ಧಾರ್ಮಿಕ ಕ್ಷೇತ್ರಗಳು ಅತೀ ದೊಡ್ಡ ಜಾಗತಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿವೆ ಎಂದು ಹೇಳಿದ್ದಾರೆ.
ವಾರ್ಷಿಕವಾಗಿ 1.4 ಕೋಟಿ ಯಾತ್ರಿಕರು ಹಜ್‌ಗೆ ಮೆಕ್ಕಾಗೆ ಭೇಟಿ ನೀಡುತ್ತಾರೆ ಮತ್ತು ಒಂದು ವರ್ಷದಲ್ಲಿ 80 ಲಕ್ಷ ಜನರು ವ್ಯಾಟಿಕನ್ ನಗರಕ್ಕೆ ಭೇಟಿ ನೀಡುತ್ತಾರೆ, ಆದರೆ ಅಯೋಧ್ಯೆಯಲ್ಲಿ ಕೇವಲ 52 ದಿನಗಳಲ್ಲಿ 16 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಲಕ್ಷಾಂತರ ಜನರು ಕಾಶಿ, ಮಥುರಾ-ವೃಂದಾವನ ಮತ್ತು ಇತರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಐದು ಪ್ರಮುಖ ಯಾತ್ರಾ ಸ್ಥಳಗಳಾದ ಅಯೋಧ್ಯೆ, ಕಾಶಿ, ಮಥುರಾ, ಗೋರಖ್‌ಪುರ ಮತ್ತು ಪ್ರಯಾಗ್‌ರಾಜ್ ಅನ್ನು 'ಪಂಚ ತೀರ್ಥ' (ಐದು ಪವಿತ್ರ ಸ್ಥಳಗಳು) ಎಂದು ಯೋಗಿ ಆದಿತ್ಯಾನಾಥ್ ಹೇಳಿದರು.
ಅಂತೆಯೇ ಹಾಲಿ ನಡೆಯುತ್ತಿರುವ ಮಹಾ ಕುಂಭವನ್ನು ಆದಿತ್ಯನಾಥ್ "ಶತಮಾನದ ಶ್ರೇಷ್ಠ ಹಬ್ಬ" ಮತ್ತು ಎಲ್ಲರಿಗೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. "ಮಹಾ ಕುಂಭವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ಜನಸ್ತೋಮವನ್ನಾಗಿ ಮಾಡಿದೆ". ಈ ಕಾರ್ಯಕ್ರಮವು ಉತ್ತರ ಪ್ರದೇಶವನ್ನು ವಿಶ್ವ ಭೂಪಟದಲ್ಲಿ ಮೇಲ್ಪಂಕ್ತಿಯಲ್ಲಿರಿಸಿದೆ ಎಂದರು.
ಕುಂಭಮೇಳ ಟೀಕೆಗಳು ಸರಿಯಲ್ಲ..
ಕುಂಭಮೇಳ ಕಾರ್ಯಕ್ರಮದ ಭವ್ಯತೆ ಹಾಳುಮಾಡಲು ವಿರೋಧ ಪಕ್ಷಗಳು ಮಾಡುತ್ತಿರುವ ಪ್ರಯತ್ನಗಳನ್ನು ಟೀಕಿಸಿದ ಯೋಗಿ ಆದಿತ್ಯಾನಾಥ್ ಅವರು, "ಇಡೀ ಜಗತ್ತು ಮಹಾ ಕುಂಭದ ಭವ್ಯತೆ ಮತ್ತು ಪಾವಿತ್ರ್ಯವನ್ನು ವೀಕ್ಷಿಸುತ್ತಿದೆ. ಆದರೆ ವಿರೋಧ ಪಕ್ಷಗಳು ಆಧಾರರಹಿತ ಟೀಕೆಗಳಲ್ಲಿ ನಿರತವಾಗಿವೆ. 64 ಕೋಟಿ ಭಕ್ತರು ಈಗಾಗಲೇ ಮಹಾ ಕುಂಭದಲ್ಲಿ ಭಾಗವಹಿಸಿದ್ದಾರೆ, ಈ ಭವ್ಯ ಕಾರ್ಯಕ್ರಮವನ್ನು "ಜಗತ್ತಿನ ಯಾವುದೇ ಧಾರ್ಮಿಕ ಸಭೆಗೆ ಹೋಲಿಸಲಾಗದು" ಎಂದು ಅವರು ಹೇಳಿದರು.