ಹೈದರಾಬಾದ್: ಜಾನುವಾರುಗಳನ್ನು ಬಾಧಿಸುವ ಚರ್ಮಗಂಟು ರೋಗಕ್ಕೆ ಲಸಿಕೆ ಕಂಡುಹಿಡಿಯಲಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಗ್ರೂಪ್ ಕಂಪನಿಯ ಬಯೋವೆಟ್ ತಿಳಿಸಿದೆ.
ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ (ಸಿಡಿಎಸ್‌ಸಿಒ) ಬಯೋಲಂಪಿ ವ್ಯಾಕ್ಸಿನ್‌ಗೆ ಪರವಾನಗಿ ದೊರೆತಿದೆ ಎಂದು ಕಂಪನಿ ಹೇಳಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಬಯೋವೆಟ್ ಕಂಪನಿಯ ಘಟಕವಿದೆ. ಬಯೋಲಂಪಿ ವ್ಯಾಕ್ಸಿನ್ ಜಾನುವಾರುಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದೆ ಎಂದಿದೆ.
ಜಾನುವಾರುಗಳ ಆರೋಗ್ಯ ಹಾಗೂ ಡೇರಿ ಉದ್ಯಮದ ಮೇಲೆ ಚರ್ಮಗಂಟು ರೋಗವು ಗಂಭೀರ ಪರಿಣಾಮ ಬೀರಿದೆ. ಹಸು- ಎಮ್ಮೆಗಳ ಹಾಲಿನ ಇಳುವರಿ ಕುಸಿತಗೊಳ್ಳುವ ಜೊತೆಗೆ, ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮವನ್ನುಂಟು ಮಾಡಿದೆ.
ಲಸಿಕೆಯ ಗುಣಮಟ್ಟ, ಸುರಕ್ಷತೆಯನ್ನು ಐಸಿಎಆರ್- ಎನ್‌ಆರ್‌ಸಿಇ ಮತ್ತು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವ್ಯಾಪಕವಾಗಿ ಪರೀಕ್ಷೆಗೊಳಪಡಿಸಲಾಗಿದ್ದು, ಜಾಗತಿಕ ಮಾನದಂಡಗಳನ್ನು ಪೂರೈಸಿರುವುದನ್ನು ಖಚಿತಪಡಿಸಿದೆ.
'ಬಯೋಲಂಪಿ ವ್ಯಾಕ್ಸಿನ್ ಆಮದು ಮಾಡಿಕೊಂಡ ಲಸಿಕೆಗಳ ಅವಲಂಬನೆಯನ್ನು ತಪ್ಪಿಸಲಿದೆ. ರೋಗಮುಕ್ತ ಜಾನುವಾರುಗಳ ಸಂಖ್ಯೆ ಹೆಚ್ಚಿದಂತೆ, ಡೇರಿ ಉದ್ಯಮದ ಸುಸ್ಥಿರತೆಯನ್ನು ಖಾತ್ರಿಪಡಿಸಲಿದೆ' ಎಂದು ಬಯೋವೆಟ್ ಸಂಸ್ಥಾಪಕ ಡಾ. ಕೃಷ್ಣ ಎಲಾ ತಿಳಿಸಿದ್ದಾರೆ.