ಪಣಜಿ: ದಕ್ಷಿಣ ಭಾರತೀಯರ ಮೆಚ್ಚಿನ ಉಪಾಹಾರದಲ್ಲಿ ಒಂದಾದ ಇಡ್ಲಿ ಹಾಗೂ ಸಾಂಬಾರ್‌ನಿಂದಾಗಿ ಕರಾವಳಿ ರಾಜ್ಯ ಗೋವಾಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ಗೋವಾದ ಬಿಜೆಪಿ ಶಾಸಕ ಮಿಷೆಲ್ ಲೋಬೊ ಗುರುವಾರ ಆರೋಪಿಸಿದ್ದಾರೆ.
ಕಾಲಂಘಾಟ್‌ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿರುವ ಲೋಬೊ, 'ಬೆಂಗಳೂರಿನ ಕೆಲವು ಹೊಟೇಲಿನವರು ಕಡಲ ತೀರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದಾರೆ.
ಇವರಲ್ಲಿ ಕೆಲವರು ವಡಾ ಪಾವ್ ಮಾಡಿ ಮಾರುತ್ತಿದ್ದಾರೆ. ಇನ್ನೂ ಕೆಲವರು ಇಡ್ಲಿ ಸಾಂಬಾರ್ ಮಾರುತ್ತಿದ್ದಾರೆ. ಇದರಿಂದಾಗಿ ವಿದೇಶಿಯರ ಸಂಖ್ಯೆ ಕ್ಷೀಣಿಸಿದೆ' ಎಂದಿದ್ದಾರೆ. ಆದರೆ ಪ್ರವಾಸೋದ್ಯಮದ ಮೇಲೆ ಇಡ್ಲಿ ಸಾಂಬಾರ್ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅವರು ವಿವರಿಸಿಲ್ಲ.
'ಗೋವಾಕ್ಕೆ ಭೇಟಿ ನೀಡುವ ವಿದೇಶಿಯರ ಸಂಖ್ಯೆ ಕ್ಷೀಣಿಸಿರುವುದಕ್ಕೆ ಸರ್ಕಾರವನ್ನು ಮಾತ್ರ ದೂಷಿಸುವುದು ಸರಿಯಲ್ಲ. ಇದರಲ್ಲಿ ಎಲ್ಲರ ಪಾಲೂ ಇದೆ. ಗೋವಾಕ್ಕೆ ಬರುತ್ತಿರುವವರಲ್ಲಿ ವಿದೇಶದ ಯುವ ಸಮುದಾಯದ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಅವರೆಲ್ಲರೂ ಬೇರೆಡೆ ಮುಖ ಮಾಡಿದ್ದಾರೆ. ಇದಕ್ಕೆ ನಿಖರ ಕಾರಣವನ್ನು ಪತ್ತೆ ಮಾಡಲು ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಪಾಲುದಾರರು ಜಂಟಿ ಸಭೆಗಳನ್ನು ನಡೆಸುವುದು ಅಗತ್ಯ' ಎಂದು ಲೋಬೊ ಹೇಳಿದ್ದಾರೆ.
'ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಅಲ್ಲಿನ ಪ್ರವಾಸಿಗರು ಬರುತ್ತಿಲ್ಲ. ಹಿಂದಿನ ಯುಎಸ್‌ಎಸ್‌ಆರ್‌ನ ಇತರ ರಾಷ್ಟ್ರಗಳ ಪ್ರವಾಸಿಗರೂ ಗೋವಾದತ್ತ ಮುಖ ಮಾಡುತ್ತಿಲ್ಲ. ಕ್ಯಾಬ್ ಕಂಪನಿಗಳು ಮತ್ತು ಸ್ಥಳೀಯ ಟ್ಯಾಕ್ಸಿ ಚಾಲಕರ ನಡುವಿನ ಸಂಘರ್ಷವನ್ನು ಮಾತುಕತೆ ಮೂಲಕ ತಣಿಸಬೇಕಿದೆ. ಒಂದೊಮ್ಮೆ ನಾವು ವ್ಯವಸ್ಥೆಯನ್ನು ಈಗಲೇ ಸರಿಪಡಿಸದಿದ್ದರೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರಾಳ ದಿನಗಳನ್ನು ನೋಡುವ ದಿನಗಳು ದೂರವಿಲ್ಲ' ಎಂದು ಲೋಬೊ ಆತಂಕ ವ್ಯಕ್ತಪಡಿಸಿದ್ದಾರೆ.