ನವದೆಹಲಿ: ತಮ್ಮ ಬೇಡಿಕೆ ಈಡೇರದಿದ್ದರೆ ಸಂಸತ್ ಭವನವನ್ನು ಸ್ಫೋಟಿಸುವುದಾಗಿ 2022ರ ಸೆಪ್ಟೆಂಬರ್‌ನಲ್ಲಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಮಧ್ಯಪ್ರದೇಶದ ಮಾಜಿ ಶಾಸಕ ಕಿಶೋರ್ ಸಮ್ರಿತೆ ತಪ್ಪಿತಸ್ಥ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ಈ ತೀರ್ಪು ನೀಡಿದ್ದು, ಸ್ಫೋಟಕ ಸರಬರಾಜು ಮತ್ತು ಅದರ ಮೂಲಕ ಜೀವಹಾನಿ ಕುರಿತ ಆರೋಪದಿಂದ ಮಾಜಿ ಶಾಸಕನನ್ನು ಮುಕ್ತಗೊಳಿಸಿದೆ.
ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಕಳುಹಿಸಿದ ಪಾರ್ಸೆಲ್‌ನಲ್ಲಿ ಪತ್ತೆಯಾದ ವಸ್ತುವನ್ನು ಪರಿಶೀಲಿಸಿದಾಗ ಅದು ಸ್ಫೋಟವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರಲಿಲ್ಲ ಎಂದು ನ್ಯಾಯಾಲಯವು ಹೇಳಿದೆ.
'ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 5 (ಎ) (ಸ್ಫೋಟಕ ವಸ್ತುವಿನ ಮೂಲಕ ಜೀವಕ್ಕೆ ಅಪಾಯ), ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9 ಬಿ (1) (ಬಿ) (ಯಾವುದೇ ಸ್ಫೋಟಕವನ್ನು ತಯಾರಿಸುವುದು, ಆಮದು ಮಾಡಿಕೊಳ್ಳುವುದು ಅಥವಾ ರಫ್ತು ಮಾಡುವುದು) ಅಡಿಯಲ್ಲಿ ಆರೋಪ ಸಾಬೀತಾಗದಿದ್ದರೂ ಸಂಸತ್ತಿಗೆ ಬೆದರಿಕೆ ಪತ್ರ ಕಳುಹಿಸಿದ್ದ ಆರೋಪ ಸಾಬೀತಾಗಿದೆ'ಎಂದು ಕೋರ್ಟ್ ಹೇಳಿದೆ.
ಐಪಿಸಿ ಸೆಕ್ಷನ್ 506ರ ಭಾಗ IIರ ಅಡಿ(ಕೊಲ್ಲುವ ಅಥವಾ ಘೋರವಾಗಿ ಗಾಯಗೊಳಿಸುವ ಬೆದರಿಕೆ) ಅಡಿಯಲ್ಲಿ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಇದರನ್ವಯ ಮಾಜಿ ಶಾಸಕನಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆಯನ್ನು ನೀಡಬಹುದಾಗಿದೆ.
ಫೆಬ್ರುವರಿ 27ರಂದು ನ್ಯಾಯಾಧೀಶರು ಶಿಕ್ಷೆಯ ಪ್ರಮಾಣದ ಬಗ್ಗೆ ವಾದಗಳನ್ನು ಆಲಿಸಲಿದ್ದಾರೆ.