ನವದೆಹಲಿ: ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಪ್ರಧಾನ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ.
"ನಿವೃತ್ತ ಐಎಎಸ್ ಅಧಿಕಾರಿ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ-2 ಆಗಿ ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ" ಎಂದು ಕೇಂದ್ರ ಸರ್ಕಾರದ ಸುತ್ತೋಲೆ ತಿಳಿಸಿದೆ.
ಶಕ್ತಿಕಾಂತ್ ದಾಸ್ ಅವರು ಡಿಸೆಂಬರ್ 2018 ರಿಂದ ಡಿಸೆಂಬರ್ 2024 ರವರೆಗೆ ಆರು ವರ್ಷಗಳ ಕಾಲ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಡಿಸೆಂಬರ್ 10 ರಂದು ನಿವೃತ್ತರಾಗಿದ್ದರು. ಆರ್ ಬಿಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು.
1980 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಶಕ್ತಿಕಾಂತ್ ದಾಸ್ ಅವರು, ಕಳೆದ 38 ವರ್ಷಗಳಲ್ಲಿ ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.