ಬೈತೂಲ್ (PTI): ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿದ 'ಚಾರಿತ್ರ್ಯ ಪ್ರಮಾಣಪತ್ರ'ದಲ್ಲಿ 'ಸಿ.ಎಂ ಸಹಾಯವಾಣಿಗೆ ದೂರು ನೀಡುವ ಚಾಳಿ ಇದೆ' ಎಂದು ಉಲ್ಲೇಖಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹೆಡ್ ಕಾನ್‌ಸ್ಟೆಬಲ್ ಬಲರಾಮ್ ಸರೆಯಾಮ್ ಮತ್ತು ಕಾನ್‌ಸ್ಟೆಬಲ್ ವಿಪ್ಲವ್ ಮರಾಸೆ ಅಮಾನತುಗೊಂಡ ಸಿಬ್ಬಂದಿ.
ರೂಪೇಶ್ ದೇಶ್‌ಮುಖ್ ಅವರಿಗೆ ನೀಡಿದ್ದ ಚಾರಿತ್ರ್ಯ ಪ್ರಮಾಣಪತ್ರದಲ್ಲಿ, ಈ ಇಬ್ಬರು ಪೊಲೀಸರು ನಿಯಮ ಮೀರಿ ಆಕ್ಷೇಪಾರ್ಹ ಹೇಳಿಕೆ ಉಲ್ಲೇಖಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಶ್ಚಲ್ ಎನ್. ಝಾರಿಯಾ ಶನಿವಾರ ತಿಳಿಸಿದರು.
'ಚಾರಿತ್ರ್ಯ ಪ್ರಮಾಣಪತ್ರವನ್ನು ಕೋರಿ ದೇಶ್‌ಮುಖ್ ಅವರು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಇದು ವಿಳಂಬವಾದ ಕಾರಣ ಮುಖ್ಯಮಂತ್ರಿಗಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ಆದರೆ ಪೊಲೀಸ್ ಸಿಬ್ಬಂದಿ ಪ್ರಮಾಣಪತ್ರ ನೀಡಿ, ಅದರಲ್ಲಿ 'ಸಿ.ಎಂ ಸಹಾಯವಾಣಿಗೆ ದೂರು ನೀಡುವ ಚಾಳಿ ಇದೆ' ಎಂದು ಕೆಂಪು ಶಾಯಿಯಲ್ಲಿ ಬರೆದಿದ್ದರು. ಫೆ.6ರಂದು ಈ ಪ್ರಮಾಣಪತ್ರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ದೇಶ್‌ಮುಖ್ ಅವರು ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕೂ ಮುನ್ನ ಎಂದೂ ಸಿ.ಎಂ ಸಹಾಯವಾಣಿಯಲ್ಲಿ ದೂರು ನೀಡಿರಲಿಲ್ಲ ಎಂದು ದೇಶ್‌ಮುಖ್ ತಿಳಿಸಿದ್ದರು. ಸದ್ಯ ದೇಶ್‌ಮುಖ್ ಅವರಿಗೆ ಹೊಸ ಪ್ರಮಾಣಪತ್ರ ವಿತರಿಸಲಾಗಿದೆ' ಎಂದು ತಿಳಿಸಿದರು.