ವಾಷಿಂಗ್ಟನ್: 'ದೀರ್ಘಕಾಲದಿಂದ ಬಾಕಿ ಉಳಿದಿರುವ ಖನಿಜ ಒಪ್ಪಂದಕ್ಕೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಶುಕ್ರವಾರ ಶ್ವೇತಭವನಕ್ಕೆ ಭೇಟಿ ನೀಡಲಿದ್ದಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆ ಮೂಲಕ ಎರಡು ರಾಷ್ಟ್ರಗಳು ಮತ್ತಷ್ಟು ಹತ್ತಿರಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊದಲ ಸಚಿವರ ಸಂಪುಟದ ಸಭೆಯಲ್ಲಿಯೇ ಈ ಘೋಷಣೆ ಮಾಡಿದ್ದು, ಅತ್ಯಂತ ದೊಡ್ಡ ಒಪ್ಪಂದವಾಗಿದೆ ಎಂದು ತಿಳಿಸಿದ್ದರು.
ರಷ್ಯಾ ವಿರುದ್ಧದ ಉಕ್ರೇನ್ ಯುದ್ಧಕ್ಕಾಗಿ ಅಮೆರಿಕವು ದೊಡ್ಡ ಮಟ್ಟದಲ್ಲಿ ಜನರ ತೆರಿಗೆ ಹಣವನ್ನು ವ್ಯಯಿಸಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾದ ಟ್ರಂಪ್ ಚುನಾವಣಾ ಪ್ರಚಾರದಲ್ಲಿಯೂ ದೂರಿದ್ದರು. ಈಗಾಗಲೇ ಅಮೆರಿಕ ನೀಡಿದ ನೆರವಿಗೆ ಪ್ರತಿಯಾಗಿ, ಉಕ್ರೇನ್‌ನಲ್ಲಿರುವ ಅಪರೂಪದ ಖನಿಜಗಳನ್ನು ಮರಳಿ ಪಡೆಯುವ ಒಪ್ಪಂದವನ್ನು ಟ್ರಂಪ್ ರೂಪಿಸಿದ್ದಾರೆ. ಇದು ಹಿಂದಿನ ಅಧ್ಯಕ್ಷ ಜೋ ಬೈಡನ್ ಅವಧಿಯಲ್ಲಿ ಅಮೆರಿಕ ನೀಡಿದ ನೆರವಿಗೆ ಪ್ರತಿಯಾಗಿ ಉಕ್ರೇನ್ ಮರುಪಾವತಿಸಬೇಕಾದ ಮೊತ್ತವಾಗಿದೆ ಎಂದು ಹೇಳಲಾಗಿದೆ.