ನವದೆಹಲಿ: ಪಂಜಾಬ್‌ನ ಎಎಪಿ ಘಟಕದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ಮುಖ್ಯಮಂತ್ರಿ ಭಗವಂತ ಮಾನ್ ಮಂಗಳವಾರ ತಳ್ಳಿಹಾಕಿದ್ದಾರೆ.
ರಾಜ್ಯ ಘಟಕದಲ್ಲೂ ಭಿನ್ನಮತ ಕಾಣಿಸಿದೆ ಎಂಬ ವದಂತಿ ಹಬ್ಬಿದ್ದು, ಇದನ್ನು ಅಲ್ಲಗಳೆದು ಒಗ್ಗಟ್ಟು ಪ್ರದರ್ಶಿಸುವ ಕ್ರಮವಾಗಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್, ಇಲ್ಲಿ ಶಾಸಕರ ಸಭೆಯನ್ನು ನಡೆಸಿದರು.
ಮುಖ್ಯಮಂತ್ರಿ ಭಗವಂತ ಮಾನ್ ಮತ್ತು ಪಂಜಾಬ್‌ನ ಪಕ್ಷದ ಸಚಿವರು, ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಮಾತನಾಡಿದ ಭಗವಂತ ಮಾನ್, 'ಪಕ್ಷಾಂತರ ಕಾಂಗ್ರೆಸ್‌ನ ಸಂಸ್ಕೃತಿ, ಆಮ್ ಆದ್ಮಿ ಪಕ್ಷದ್ದಲ್ಲ. ಕಾಂಗ್ರೆಸ್‌ಗೆ ಪಕ್ಷಾಂತರದ ಇತಿಹಾಸವೇ ಇದೆ' ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
'ಎಎಪಿ ಶಾಸಕರಿಗೆ ಬದ್ಧತೆ ಇದೆ. ಅವರಿಗೆ ಅಧಿಕಾರದ ದಾಹವಿಲ್ಲ. ಕಾಂಗ್ರೆಸ್‌ನವರು ಎಎಪಿ ಬಗ್ಗೆ ಚಿಂತಿಸದೆ ದೆಹಲಿಯಲ್ಲಿ ಅವರ ಪಕ್ಷದ ಎಷ್ಟು ಶಾಸಕರಿದ್ದಾರೆ ಎಂದು ಗಮನಿಸಲಿ' ಎಂದು ಮಾನ್ ತಿರುಗೇಟು ನೀಡಿದರು.
'ಎಎಪಿಯ 30 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ' ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರತಾಪ್ ಸಿಂಗ್ ಬಜ್ವಾ ಅವರು ನೀಡಿದ್ದ ಹೇಳಿಕೆಗೆ, 'ಬಜ್ವಾ ಅವರು ಈಗ ನಮ್ಮ ಶಾಸಕರ ಲೆಕ್ಕ ಇಡುವುದು ಬೇಡ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಎಷ್ಟಿದ್ದಾರೆ ಎಂದು ಎಣಿಸಿಕೊಳ್ಳಲಿ' ಎಂದರು.
'ಬಜ್ವಾ, ಸಿ.ಎಂ ಅಭ್ಯರ್ಥಿಯಲ್ಲ' ಎಂದು ಕಾಂಗ್ರೆಸ್ ಘೋಷಿಸಿದ ದಿನ ಅವರೇ ಬಿಜೆಪಿಗೆ ಸೇರಲಿದ್ದಾರೆ' ಎಂದು ಟೀಕಿಸಿದರು.
ದೆಹಲಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದಕ್ಕಾಗಿ ಕೇಜ್ರಿವಾಲ್ ಅವರು ಪಂಜಾಬ್‌ನ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಇಡೀ ದೇಶಕ್ಕೆ ಮಾದರಿ ಆಗುವಂತೆ ನಾವು ಪಂಜಾಬ್ ಅನ್ನು ರೂಪಿಸಲಿದ್ದೇವೆ' ಎಂದರು.
ಸುಖ್‌ಜಿಂದರ್ ಸಿಂಗ್ ರಾಂಧವ ಕಾಂಗ್ರೆಸ್ ಹಿರಿಯ ಮುಖಂಡಕೇಜ್ರಿವಾಲ್ ಅವರು ತುರ್ತಾಗಿ ಸಭೆ ಕರೆದಿದ್ದರೆ ಸಂದೇಶ ಪಂಜಾಬ್‌ನಲ್ಲಿ ಆ ಪಕ್ಷ ವಿಭಜನೆ ಆಗಲಿದೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದೇ ಆಗಿದೆ. ತರುಣ್ ಚುಗ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಜಾಬ್‌ನಲ್ಲಿಯೂ ಅಧಿಕಾರ ಎಎಪಿ ಹಿಡಿತದಿಂದ ತ್ವರಿತಗತಿಯಲ್ಲಿ ಜಾರುತ್ತಿದೆ. ದಿನ ಕಳೆದಂತೆ ಅಲ್ಲಿಯೂ ಬಿಜೆಪಿಯ ನೆಲೆ ಭದ್ರವಾಗುತ್ತಿದೆ.