ಪ್ರಯಾಗರಾಜ್: ಹವಾಮಾನ ಬದಲಾವಣೆಯಿಂದ ನದಿಗಳು ಬರಿದಾಗುತ್ತಿವೆ. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಆಗುತ್ತಿರುವ ಭಾರಿ ಪ್ರಮಾಣದ ಏರಿಕೆ ಬಗ್ಗೆ ಟೀಕೆಗಳನ್ನು ಮಾಡುತ್ತಾ ಕೂರುವ ಬದಲು, ಜನರು ತುರ್ತು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
ಮಹಾ ಕುಂಭಮೇಳದಲ್ಲಿ ನಡೆದ 'ಹವಾಮಾನ ಬದಲಾವಣೆ, ಪರಿಸರ ಮತ್ತು ನಂಬಿಕೆ' ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಯೋಗಿ, ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿನ ನದಿಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ಮಾಡಿದೆ. ಕುಂಭಮೇಳವು ಭಾರಿ ಸಂಖ್ಯೆಯ ಜನಸ್ತೋಮಕ್ಕೆ ಸಾಕ್ಷಿಯಾಗಿರುವುದು ಅದೇ ಕಾರಣಕ್ಕೆ ಎಂದು ಪ್ರತಿಪಾದಿಸಿದ್ದಾರೆ.
'ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಇದು, ಭೂಮಿ ತಾಯಿಯ ಜೀವನಾಡಿಯಾಗಿರುವ ನದಿಗಳನ್ನು ಒಣಗಿಸುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಜನರು ಪರಸ್ಪರ ದೂರುತ್ತಾ ಕೂರುತ್ತಾರೆಯೇ ಹೊರತು, ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಣೆ ಹೊತ್ತುಕೊಳ್ಳುವುದಿಲ್ಲ. ಆ ನಿಟ್ಟಿನಲ್ಲಿ, ನಾವೆಲ್ಲರೂ ಸಾಮೂಹಿಕವಾಗಿ ಮತ್ತು ವೈಯಕ್ತಿವಾಗಿ ಕಾರ್ಯ ಪ್ರವೃತ್ತವಾಗಬೇಕಾದ ಸಮಯ ಇದಾಗಿದೆ' ಎಂದು ಕರೆ ನೀಡಿದ್ದಾರೆ.
10 ವರ್ಷಗಳ ಹಿಂದೆ ಗಂಗಾ ಮತ್ತು ಯಮುನಾ ನದಿಗಳು ಈಗ ಇರುವಷ್ಟು ಸ್ವಚ್ಛವಾಗಿ ಇರಲಿಲ್ಲ. ಆದರೆ, ಯುಪಿ ಸರ್ಕಾರ ಈ ನದಿಗಳನ್ನು ಪುನರುಜ್ಜೀವನಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.
'ನದಿ ನೀರು ಶುದ್ಧವಾಗಿರುವುದರಿಂದ ಹಾಗೂ ಉತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿರುವುದರಿಂದಾಗಿ, ಜನರು ಭಾರಿ ಪ್ರಮಾಣದಲ್ಲಿ ಕುಂಭಮೇಳಕ್ಕೆ ಬರುತ್ತಿದ್ದಾರೆ' ಎಂದಿದ್ದಾರೆ.
ಹವಾಮಾನ ಬದಲಾವಣೆ ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿತು. ಮನೆಗಳಿಂದ ಹೊಗೆ ಹೊರಬರುವುದನ್ನು ನಿಯಂತ್ರಿಸಲು ಸುಮಾರು 10 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸಿದೆ ಎಂದು ಶ್ಲಾಘಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು, ಕಳೆದ 10 ವರ್ಷಗಳಲ್ಲಿ 210 ಕೋಟಿ ಗಿಡಗಳನ್ನು ನೆಟ್ಟಿದೆ. ಈ ಪೈಕಿ ಶೇ 70 ರಿಂದ ಶೇ 80ರಷ್ಟು ಉಳಿದುಕೊಂಡಿವೆ ಎಂದಿದ್ದಾರೆ. ಹಾಗೆಯೇ, ಮಾನವ ಸಂಕುಲವನ್ನು ಕಾಪಾಡುವ ನಿಟ್ಟಿನಲ್ಲಿ ನದಿಗಳನ್ನು ಅತಿಕ್ರಮಿಸದಂತೆ ಹಾಗೂ ವನ್ಯಜೀವಿಗಳನ್ನು ರಕ್ಷಿಸುವಂತೆ ಜನರಿಗೆ ಕರೆ ನೀಡಿದ್ದಾರೆ.