ಮುಂಬೈ: ಎಲ್ಲ ವ್ಯಾಜ್ಯಗಳೂ ನ್ಯಾಯಾಲಯದ ಮೂಲಕವೇ ಇತ್ಯರ್ಥವಾಗಬೇಕು ಎಂದಿಲ್ಲ. ರಾಜೀ ಸಂಧಾನದ ಮೂಲಕ ಸಹ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದು. ಇದು ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಸಂಬಂಧಗಳನ್ನೂ ಬಲಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಶನಿವಾರ ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎಂಎನ್‌ಎಲ್‌ಯು) ಮೂರನೇ ಘಟಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, 'ಎಲ್ಲ ಪ್ರಕರಣಗಳನ್ನೂ ಕಾನೂನಿನ ಕಣ್ಣಿನಿಂದಲೇ ನೋಡಬೇಕೆಂದಿಲ್ಲ, ಮಾನವೀಯ ಆಯಾಮದಲ್ಲಿಯೂ ನೋಡಬೇಕಾಗುತ್ತದೆ' ಎಂದು ಹೇಳಿದರು.
ವಕೀಲರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರು. ಅವರು ಸಮಸ್ಯೆಯ ಕಾನೂನಾತ್ಮಕ ಮತ್ತು ಮಾನವೀಯ ಆಯಾಮವನ್ನು ಮುಂದಿಟ್ಟು, ಸೃಜನಶೀಲ ಪರಿಹಾರವನ್ನು ಸೂಚಿಸಬೇಕು ಎಂದರು.
'ನಮ್ಮ ಪೂರ್ವಜನರು ಎಂದೂ ಊಹಿಸಿರದ ಸವಾಲುಗಳನ್ನು ಇಂದಿನ ಪೀಳಿಗೆ ಎದುರಿಸುತ್ತಿದೆ. ಹವಾಮಾನ ಬದಲಾವಣೆಯು ಪರಿಸರಕ್ಕೆ ಮಾತ್ರವಲ್ಲ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಡಿಜಿಟಲ್ ವಿಕಾಸಕ್ಕೂ ಬೆದರಿಕೆಯೊಡ್ಡುತ್ತಿದೆ. ಇದು ಖಾಸಗಿತನ, ಭದ್ರತೆ, ಮಾನವ ಸಂವಹನದ ಸ್ವಭಾವದ ಬಗ್ಗೆಯೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ' ಎಂದು ಹೇಳಿದರು.
ಹೊಸ ತಂತ್ರಜ್ಞಾನದಿಂದಾಗಿ ಪ್ರಜಾಪ್ರಭುತ್ವ ಸಹ ಹೊಸ ರೂಪ ಪಡೆದಿದೆ ಎಂದು ಅವರು ಹೇಳಿದರು.
'ಇವುಗಳೆಲ್ಲ ಕೇವಲ ಅಮೂರ್ತ ಸಮಸ್ಯೆಗಳಲ್ಲ. ಮಾನವೀಯತೆ, ಮಾನವ ಘನತೆ, ಸ್ವಾತಂತ್ರ್ಯಕ್ಕೆ ಎದುರಾಗಿರುವ ಮೂಲಭೂತ ಸವಾಲುಗಳು. ಇದಕ್ಕೆ ನವೀನ ರೀತಿಯ ಮಾರ್ಗೋಪಾಯಗಳ ಅಗತ್ಯವಿದೆ' ಎಂದು ಹೇಳಿದರು.