ನವದೆಹಲಿ: ಉತ್ತರ ಪ್ರದೇಶದ ಹುಡುಗಿಯೊಬ್ಬಳ ಆತ್ಮಹತ್ಯೆಯ ಬಗ್ಗೆ ಡಿಐಜಿ ನೇತೃತ್ವದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಮರುತನಿಖೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಯುವತಿಯು ಮುಸ್ಲಿಂ ಹುಡುಗನ ಜೊತೆ ಸಂಬಂಧ ಹೊಂದಿದ್ದ ಕಾರಣಕ್ಕೆ ಆಕೆಯ ಕುಟುಂಬದ ಸದಸ್ಯರು ಆ ಹುಡುಗನ ಮೇಲೆ ಹಲ್ಲೆ ನಡೆಸಿದ್ದರು.
ಹಲ್ಲೆಯ ಪರಿಣಾಮವಾಗಿ ಹುಡುಗ 2022ರಲ್ಲಿ ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆಯಲ್ಲಿ ಮೃತಪಟ್ಟಿದ್ದ. ಇದಾದ ನಂತರದಲ್ಲಿ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗಿದೆ.
ಮೃತ ಹುಡುಗನ ತಂದೆ ಮತ್ತು ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಕ್ರಿಮಿನಲ್ ಕ್ರಮ ಜರುಗಿಸಿದ್ದನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠವು ರದ್ದುಮಾಡಿದೆ.
ಮೃತ ಬಾಲಕಿಯ ಸಂಬಂಧಿಕ ನೀಡಿದ್ದ ದೂರನ್ನು ಮಾತ್ರ ಒಪ್ಪಿ, ಏಕಮುಖವಾಗಿ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಪೀಠವು ಹೇಳಿದೆ.
ಹುಡುಗನ ತಂದೆ ಮತ್ತು ಇತರ ಕೆಲವರು ಹುಡುಗಿಯ ಮನೆಗೆ ಬಂದಿದ್ದರು, 'ನಿನ್ನಿಂದಾಗಿ ನಮ್ಮ ಹುಡುಗ ಮೃತಪಟ್ಟಿದ್ದಾನೆ. ನೀನೂ ಏಕೆ ಸಾಯಬಾರದು' ಎಂದು ಹೇಳಿದ್ದರು. ನಂತರ ಹುಡುಗಿ ಜೀವ ಕಳೆದುಕೊಂಡಿದ್ದಾಳೆ ಎಂದು ಹುಡುಗಿಯ ಕಡೆಯವರು ದೂರು ನೀಡಿದ್ದನ್ನು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.
ಹುಡುಗಿಯ ಕಡೆಯವರು ಹುಡುಗನ ಮೇಲೆ ಹಲ್ಲೆ ನಡೆಸಿದ ನಂತರ ಈ ಪ್ರಸಂಗ ನಡೆದಿತ್ತು. ಹಲ್ಲೆಯಿಂದಾಗಿ ಗಾಯಗೊಂಡಿದ್ದ ಹುಡುಗ, ನಂತರ ಮೃತಪಟ್ಟಿದ್ದ.
ಹುಡುಗನ ತಂದೆ ಅಯೂಬ್ ಮತ್ತು ಇತರರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠವು, ದೂರುದಾರರು ಹೇಳಿದ್ದನ್ನೇ ಗಿಣಿಪಾಠ ಒಪ್ಪಿಸುವ ರೀತಿಯಲ್ಲಿ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.
'ಬೇರೆ ಆಯಾಮದ ಬಗ್ಗೆ ತನಿಖೆ ನಡೆಸುವ ಯತ್ನ ನಡೆದಿತ್ತೇ ಎಂಬ ಪ್ರಶ್ನೆಗೆ ಮೌನ ಮಾತ್ರವೇ ಉತ್ತರವಾಗಿತ್ತು' ಎಂದು ಪೊಲೀಸರ ನಡೆ ಕುರಿತು ಪೀಠ ಹೇಳಿದೆ.
ಸ್ವತಂತ್ರವಾದ, ಆಳವಾದ ಮತ್ತು ಸಮಗ್ರವಾದ ತನಿಖೆ ಮಾತ್ರವೇ ನಿಜವನ್ನು ಬಯಲಿಗೆ ತರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಎಸ್‌ಐಟಿಯು ಅಗತ್ಯ ಕಂಡುಬಂದರೆ ಹೊಸದಾಗಿ ಎಫ್‌ಐಆರ್ ದಾಖಲು ಮಾಡಿಕೊಳ್ಳಬಹುದು, ಅದು ಎರಡು ತಿಂಗಳಲ್ಲಿ ಮರುತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.