ಸ್ಯಾನ್ ಹೊಸೆ : ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ಭಾರತ ಮತ್ತು ಮಧ್ಯ ಏಷ್ಯಾದ ವಲಸಿಗರನ್ನು ವಾಪಸು ಕಳುಹಿಸುವ ಪ್ರಕ್ರಿಯೆಗೆ ನೆರವಾಗಲು ಕೋಸ್ಟರಿಕಾ ಒಪ್ಪಿದೆ ಎಂದು ಅಧಿಕೃತ ವರದಿಗಳು ಮಂಗಳವಾರ ತಿಳಿಸಿವೆ.
ಅಮೆರಿಕದಿಂದ ಗಡೀಪಾರು ಮಾಡಿರುವ ಭಾರತೀಯ ವಲಸಿಗರನ್ನು ಸ್ವೀಕರಿಸಲು ಕೋಸ್ಟರಿಕಾ ಒಪ್ಪಿಗೆ ಸೂಚಿಸಿದ್ದು, 200 ವಲಸಿಗರ ಮೊದಲ ತಂಡ ಬುಧವಾರ ಪ್ರಯಾಣಿಕರ ವಿಮಾನದಲ್ಲಿ ಜುವಾನ್ ಸಾಂತಮರಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಕೋಸ್ಟರಿಕಾದ ಅಧ್ಯಕ್ಷ ರಾಡ್ರಿಗೋ ಚಾವೆಸ್ ರೋಬ್ಲೆಸ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಇವರು ಮಧ್ಯ ಏಷ್ಯಾದ ದೇಶಗಳು ಮತ್ತು ಭಾರತಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಭಾರತೀಯರ ಸಂಖ್ಯೆ ಎಷ್ಟು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ವಲಸಿಗರು ತಮ್ಮ ಮೂಲ ದೇಶಗಳನ್ನು ತಲುಪಲು ಕೋಸ್ಟರಿಕಾ 'ಸಂಪರ್ಕ ಸೇತುವೆ'ಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದೆ.
ವಲಸೆ ಸೇರಿ ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚಿಸಲು ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿ ಬಂದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಆಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದರ ನಡುವೆ ಒಟ್ಟು 332 ಭಾರತೀಯರನ್ನು ಒಳಗೊಂಡ ಮೂರು ತಂಡಗಳನ್ನು ಈಗಾಗಲೇ ಭಾರತಕ್ಕೆ ಕಳುಹಿಸಲಾಗಿದೆ.