ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಮೂಲ ಅಸ್ಮಿತೆಯನ್ನು ಉಳಿಸಿಕೊಳ್ಳುವ ಉದ್ದೇಶದ, ಜನ ಮಿತಿಯಿಲ್ಲದೆ ಜಮೀನು ಖರೀದಿಸುವುದನ್ನು ನಿರ್ಬಂಧಿಸುವ ಕಠಿಣ ಭೂ ಕಾನೂನಿಗೆ ರಾಜ್ಯದ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಜನ ಜಮೀನು ಖರೀದಿಸುವುದರ ಮೇಲೆ ಮಿತಿ ಇರಬೇಕು ಎಂಬ ಬೇಡಿಕೆಯು ಸಾರ್ವಜನಿಕರಿಂದ ಬಹುಕಾಲದಿಂದ ಇತ್ತು ಎಂದು ಅವರು ಹೇಳಿದ್ದಾರೆ.
ಕಠಿಣವಾದ ಭೂ ಕಾನೂನು ಜಾರಿಗೆ ತರುವ ಇರಾದೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವ್ಯಕ್ತಪಡಿಸಿದ್ದರು.
'ಈ ಐತಿಹಾಸಿಕ ಹೆಜ್ಜೆಯು ರಾಜ್ಯದ ಸಂಪನ್ಮೂಲಗಳನ್ನು, ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಪ್ರಜೆಗಳ ಹಕ್ಕುಗಳನ್ನು ರಕ್ಷಿಸುತ್ತದೆ. ಇದು ರಾಜ್ಯದ ಮೂಲ ಅಸ್ಮಿತೆಯನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ' ಎಂದು ಧಾಮಿ ಅವರು ಬುಧವಾರ ಎಕ್ಸ್ ಮೂಲಕ ಹೇಳಿದ್ದಾರೆ.
ಹೊರಗಿನವರು ಉತ್ತರಾಖಂಡದಲ್ಲಿ ಖರೀದಿಸಬಹುದಾದ ಜಮೀನಿಗೆ ಇದ್ದ ಮಿತಿಯನ್ನು 2018ರಲ್ಲಿ ತೆರವು ಮಾಡಲಾಗಿತ್ತು. ಆದರೆ ಮಿತಿಯನ್ನು ತೆರವು ಮಾಡಿದ ಪರಿಣಾಮವಾಗಿ ರಾಜ್ಯದ ಕೃಷಿ ಜಮೀನಿನ ವ್ಯಾಪ್ತಿಯು ಕುಗ್ಗುತ್ತಿದೆ ಎಂಬ ಕಳವಳ ಸ್ಥಳೀಯರಲ್ಲಿದೆ.