ವಲೆನ್ಸಿಯಾ: ಸ್ಪೇನ್‌ನ ವಲೆನ್ಸಿಯಾ ನಗರದಲ್ಲಿ ನಡೆಯುತ್ತಿರುವ ಪೋಶೆ ಸ್ಪ್ರಿಂಟ್ ಚಾಲೆಂಜ್ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರ ಕಾರು ಎರಡು ಬಾರಿ ಅಪಘಾತಕ್ಕೀಡಾಗಿದೆ. ಅಜಿತ್ ಅವರು ಸುರಕ್ಷಿತವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸುರೇಶ್ ಚಂದ್ರ ಹೇಳಿದ್ದಾರೆ.
ಘಟನೆಯ ಕುರಿತು ಸಾಮಾಜಿಕ ಮಾದ್ಯಮ ಎಕ್ಸ್‌ನಲ್ಲಿ ಅಪಘಾತದ ವಿಡಿಯೊ ತುಣುಕನ್ನು ಸುರೇಶ್ ಚಂದ್ರ ಹಂಚಿಕೊಂಡಿದ್ದಾರೆ. 'ವಲೆನ್ಸಿಯಾದಲ್ಲಿ ನಡೆಯುತ್ತಿರುವ ಕಾರು ರೇಸ್‌ನಲ್ಲಿ 5ನೇ ಸುತ್ತಿನವರೆಗೂ ಅಜಿತ್ ಅವರಿಗೆ ಉತ್ತಮವಾಗಿಯೇ ಇತ್ತು. ಆದರೆ 6ನೇ ಸುತ್ತಿನಲ್ಲಿ ಅಪಘಾತವಾಯಿತು. ಅವರು ರೇಸ್‌ನಲ್ಲಿ 14ನೇ ಸ್ಥಾನ ಪಡೆದುಕೊಂಡಿದ್ದಾರೆ' ಎಂದಿದ್ದಾರೆ.
'ಮೊದಲು ಅಜಿತ್ ಅವರ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅದು ಅಜಿತ್ ಅವರ ತಪ್ಪಲ್ಲ ಎನ್ನುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಎರಡನೇ ಬಾರಿ ಡಿಕ್ಕಿ ಹೊಡೆದಾಗ ಅಜಿತ್ ಕಾರು ಪಲ್ಟಿಯಾಗಿದೆ. ಅಪಘಾತದ ಬಳಿಕ ಅಜಿತ್ ಸುರಕ್ಷಿತವಾಗಿ ಹೊರಬಂದಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಅಜಿತ್ ಅವರ ಕಾರು ಡಿಕ್ಕಿಯಾದಾಗ ಮುಂದೆ ಇದ್ದ ಕಾರು ತಿರುಗಿ ನಿಂತಿದೆ. ಈ ವೇಳೆ ಅಜಿತ್ ಅವರ ಕಾರು ಎರಡನೇ ಬಾರಿ ಡಿಕ್ಕಿ ಹೊಡೆದು ಟ್ರ್ಯಾಕ್‌ನಲ್ಲಿ ಪಲ್ಟಿಯಾಗಿರುವುದನ್ನು MotorVikatan ಹಂಚಿಕೊಂಡಿರುವ ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಹಿಂದೆ ದುಬೈನಲ್ಲಿ ನಡೆದ ಕಾರು ರೇಸ್‌ನಲ್ಲಿಯೂ ಅಜಿತ್ ಅವರ ಕಾರು ಅಪಘಾತಕ್ಕೀಡಾಗಿತ್ತು.