ನವದೆಹಲಿ: 'ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾಗಿದ್ದು ಇದನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಪ್ಪಿಕೊಳ್ಳಬೇಕು. ಜನರ ಕುರಿತು ಕಿಂಚಿತ್ತಾದರೂ ಕಾಳಜಿ ತೋರಿಸುವ ಮೂಲಕ ಜನರಿಗೆ ಅಗತ್ಯ ಪರಿಹಾರ ಒದಗಿಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಕುರಿತು ಮಾಧ್ಯಮ ವರದಿ ಬಿಡುಗಡೆ ಮಾಡಿದ್ದು, 'ತರಕಾರಿ ಬೆಲೆ ಕುಸಿತದಿಂದ ಸರಾಸರಿ ಹಣದುಬ್ಬರ ಪ್ರಮಾಣ ತಗ್ಗಿದೆ.
ಆದರೆ ಬೇಳೆಕಾಳು ಸಹಿತ ಈಗಲೂ ಕೆಲ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ' ಎಂದಿದ್ದಾರೆ.
'ಮೋದಿ ಸರ್ಕಾರದಲ್ಲಿ ಹಣದುಬ್ಬರ ಉಂಟಾಗಿರುವುದರಿಂದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಬಡವರಿಗೆ ಹೊತ್ತಿನ ಊಟಕ್ಕೂ ತೊಂದರೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಹಣದುಬ್ಬರ ಗಗನಮುಖಿಯಾಗಿದೆ. ಹಣದುಬ್ಬರ ಮತ್ತು ನಿರುದ್ಯೋಗ ಕುರಿತು ಮಾತನಾಡಲು ಮೋದಿ ಸರ್ಕಾರ ನಿರಾಕರಿಸಿದರೂ, ಕಾಲಕಾಲಕ್ಕೆ ವಾಸ್ತವಾಂಶ ಬಹಿರಂಗವಾಗುತ್ತಲೇ ಇವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಸಿಕ ವರದಿಯಲ್ಲಿ ಊಟದ 'ಥಾಲಿ' ಕೂಡಾ ದುಬಾರಿಯಾಗಿರುವುದು ತೋರಿಸುತ್ತಿದೆ. ತೊಗರಿ ಬೇಳೆ ಪ್ರತಿ ಕೆ.ಜಿ.ಗೆ ₹140ರ ಗಡಿ ದಾಟಿದೆ. ಇ-ಕಾಮರ್ಸ್ ಕಂಪನಿಗಳು ಇದನ್ನೇ ₹200ಕ್ಕೆ ಮಾರಾಟ ಮಾಡುತ್ತಿವೆ. ಆರ್‌ಬಿಐ ಪ್ರಕಾರ ಅಡುಗೆ ಎಣ್ಣೆಯ ದರ ಅಕ್ಟೋಬರ್‌ನಿಂದ ಈಚೆ ಏರಿಕೆಯಾಗಿದೆ' ಎಂದಿದ್ದಾರೆ.