ನವದೆಹಲಿ: ನಿದ್ದೆ, ಊಟ, ವ್ಯಾಯಾಮ ಸೇರಿ ಸ್ವ-ಆರೈಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಭಾರತೀಯರು ಮೀಸಲಿಡುವ ಸರಾಸರಿ ಸಮಯವು ಕಳೆದ ಐದು ವರ್ಷಗಳಲ್ಲಿ ತೀರಾ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ಸಮೀಕ್ಷೆ ಹೇಳಿದೆ.
2019ರಲ್ಲಿ 6 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಸ್ವ-ಆರೈಕೆಗೆ ಮೀಸಲಿಡುತ್ತಿದ್ದ ಸರಾಸರಿ ಸಮಯವು 726 ನಿಮಿಷ ಅಥವಾ 12.1 ಗಂಟೆ ಆಗಿತ್ತು.
2024ರಲ್ಲಿ ಇದು 708 ನಿಮಿಷ ಅಥವಾ 11.8ಗಂಟೆಗೆ ಇಳಿದಿದೆ ಎಂದು ವಿವರಿಸಿದೆ.
ಪುರುಷರಿಗೆ ಹೋಲಿಸಿದರೆ (710 ನಿಮಿಷ), ಮಹಿಳೆಯರು ಸ್ವ-ಆರೈಕೆಗೆ (706 ನಿಮಿಷ) ಮೀಸಲಿಡುವ ಸಮಯವು ಕಡಿಮೆಯಾಗಿದೆ ಎಂದು ಹೇಳಿದೆ.
ಉದ್ಯೋಗ ಚಟುವಟಿಕೆ:
15ರಿಂದ 59 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ದಿನವೊಂದರಲ್ಲಿ ಉದ್ಯೋಗ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯು ಹೆಚ್ಚಳವಾಗಿದೆ ಎಂದು ಎನ್‌ಎಸ್‌ಒ 2024ರ ಜನವರಿಯಿಂದ ಡಿಸೆಂಬರ್‌ವರೆಗೆ ನಡೆಸಿದ ಸಮಯ ಬಳಕೆ ಸಮೀಕ್ಷೆ ಹೇಳಿದೆ.
ಶೇ 75ರಷ್ಟು ಪುರುಷರು ಹಾಗೂ ಶೇ 25ರಷ್ಟು ಮಹಿಳೆಯರು ಈ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.