ನವದೆಹಲಿ: ಮಹಾ ಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್‌ದಲ್ಲಿ ಮೂರು ನದಿಗಳು ಸೇರುವ ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ (ಎಫ್‌ಸಿ) ಬ್ಯಾಕ್ಟೀರಿಯಾ ಪ್ರಮಾಣವು ಅನುಮತಿಸಲ್ಪಟ್ಟ ಮಿತಿಗಿಂತ ಅಧಿಕ ಇದೆ. ನೀರು ಸ್ನಾನಕ್ಕೆ ಯೋಗ್ಯವಾದ ಗುಣಮಟ್ಟ ಹೊಂದಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೇಳಿದೆ.
ಮಂಡಳಿಯು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಿದೆ.
ಸಂಸ್ಕರಿಸದೇ ಇರುವ ನೀರು ಅಥವಾ ಕಲುಷಿತ ನೀರು ನದಿಗೆ ಸೇರ್ಪಡೆಗೊಂಡಾಗ ಮತ್ತು ಮಲದಲ್ಲಿ ಈ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಕಂಡುಬರುತ್ತದೆ. ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಗೆ ಈ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ.
ಫೀಕಲ್ ಕೋಲಿಫಾರ್ಮ್ ಬ್ಯಾಕ್ಷೀರಿಯಾದ ಅನುಮತಿಸಿದ ಮಿತಿಯು ಪ್ರತಿ 100 ಮಿಲಿ ಲೀಟರ್‌ಗೆ 2,500 ಎಂಪಿಎನ್ (ಗರಿಷ್ಠ ಇರಬಹುದಾದ ಸಂಖ್ಯೆ) ಇರಬೇಕು ಎಂದು ಮಂಡಳಿ ಹೇಳುತ್ತದೆ.
'ಮಹಾ ಕುಂಭ ಮೇಳ ಅಂಗವಾಗಿ ಭಾರಿ ಸಂಖ್ಯೆಯಲ್ಲಿ ಜನರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದು, ಇದು ಈ ಬ್ಯಾಕ್ವೀರಿಯಾ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ' ಎಂದು ವರದಿಯಲ್ಲಿ ವಿವರಿಸಲಾಗಿದೆ.