ಚೆನ್ನ್ಯೆ :ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರೋಧಿ ಸದ್ದು ಮತ್ತೆ ತಾರಕಕ್ಕೇರಿದೆ. ಇದೇ ವೇಳೆ ತಮಿಳುನಾಡು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರಂಜನಾ ನಾಟ್‌ಚಿಯಾರ್ ಎನ್ನುವರು ಬಿಜೆಪಿ ತೊರೆದು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸೇರಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಬಿಜೆಪಿ ಸಮರ್ಥಿಸುತ್ತಿರುವುದನ್ನು ವಿರೋಧಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ತಮಿಳುನಾಡಿಗೆ ಟಿವಿಕೆ ಹಾಗೂ ವಿಜಯ್ ಹೊಸ ಆಶಾಕಿರಣ. ಬಿಜೆಪಿ ಕುತಂತ್ರದ ಮೂಲಕ ದಕ್ಷಿಣ ರಾಜ್ಯಗಳಲ್ಲಿ ರಾಜಕೀಯ ಮಾಡುತ್ತಿದೆ ಎಂದು ರಂಜನಾ ಹರಿಹಾಯ್ದಿದ್ದಾರೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷ ಹುಟ್ಟುಹಾಕಿರುವ ನಟ ವಿಜಯ್ ಅವರು ತಮ್ಮ ಪಕ್ಷದ ಮೊದಲ ವಾರ್ಷಿಕೋತ್ಸವವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿಯೇ ರಂಜನಾ ಟಿವಿಕೆ ಸೇರ್ಪಡೆಯಾದರು. ರಂಜನಾ ಅವರು ತಮಿಳು ಚಿತ್ರೋದ್ಯಮಲ್ಲಿ ಗುರುತಿಸಿಕೊಂಡು, ರಾಜಕೀಯಕ್ಕೆ ಧುಮುಕಿದ್ದರು.
2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಎಂದೇ ಕರೆಯಲಾಗುತ್ತಿರುವ ಈ ವೇದಿಕೆಯಲ್ಲಿ ವಿಜಯ್ ಜೊತೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಹ ಕಾಣಿಸಿಕೊಂಡಿದ್ದರು.
ಇದರ ಬೆನ್ನಲ್ಲೇ, ವಿಜಯ್ ಸಹಿ ಹಾಕಿರುವ #GetOut ಫಲಕಗಳು ಸಾಕಷ್ಟು ಸದ್ದು ಮಾಡುತ್ತಿವೆ. ಬಿಜೆಪಿ ಮತ್ತು ಡಿಎಂಕೆಯನ್ನು ಗುರಿಯಾಗಿಸಿ #GetOutModi ಹಾಗೂ #GetOutStalin ಎಂಬ ಫಲಕಗಳು ಎಲ್ಲೆಡೆ ಪ್ರದರ್ಶನ ಕಂಡವು. ಈ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ತಮಿಳುನಾಡಿಗೆ ಅನ್ಯಾಯ ಮಾಡುತ್ತಿವೆ ಎಂದು ಪರೋಕ್ಷವಾಗಿ ವಿಜಯ್ ಟೀಕಿಸಿದ್ದಾರೆ.
'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ವಂಶಾಡಳಿತ ರಾಜಕಾರಣ ವಿಷಯವಾಗಿ ವಿಜಯ್ ಅವರು ಡಿಎಂಕೆಯನ್ನು ಟೀಕಿಸಿದ್ದಾರೆ. ಬಿಜೆಪಿಯ 'ಒಂದು ರಾಷ್ಟ್ರ, ಒಂದು ಚುನಾವಣೆ' ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಆದರೆ ಎಐಎಡಿಎಂಕೆ ಕುರಿತ ಅವರ ಮೃದುಧೋರಣೆ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಟಿವಿಕೆ ಜತೆ ಮೈತ್ರಿ ನಡೆದಿದೆಯೇ ಎಂಬ ಪ್ರಶ್ನೆಗಳು ಹುಟ್ಟುಹಾಕಿವೆ.