ಕೋಲ್ಕತ್ತ: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದಡಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಮೂವರು ಬಿಜೆಪಿ ಶಾಸಕರನ್ನು ಇಂದು (ಸೋಮವಾರ) ಬಜೆಟ್ ಅಧಿವೇಶನದಿಂದ ಸಭಾಪತಿ ಅಮಾನತುಗೊಳಿಸಿದ್ದಾರೆ.
ಸುವೇಂದು ಹೊರತುಪಡಿಸಿ, ಅಗ್ನಿಮಿತ್ರ ಪಾಲ್, ಬಂಕಿಮ್ ಘೋಷ್ ಮತ್ತು ಬಿಸ್ವನಾಥ್ ಕರಕ್ ಅವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ ಎಂದು ಸಭಾಪತಿ ಬಿಮನ್ ಬ್ಯಾನರ್ಜಿ ತಿಳಿಸಿದ್ದಾರೆ.
ಪಾಲ್ ಮಂಡಿಸಿದ ನಿಲುವಳಿ ಸೂಚನೆಯ ಕುರಿತು ಚರ್ಚೆ ನಡೆಸಲು ಸಭಾಪತಿ ನಿರಾಕರಿಸಿದ ಬಳಿಕ ಸುವೇಂದು ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದರು. ಈ ವೇಳೆ ಕಾಗದಗಳನ್ನು ಹರಿದು ಗದ್ದಲ ಸೃಷ್ಟಿಸಿದರು. ಈ ವೇಳೆ ಸಭಾಪತಿ ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದಡಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದಾರೆ.
'ಹೈಕೋರ್ಟ್‌ನ ಆದೇಶದಂತೆ ಕೋಲ್ಕತ್ತದ ಕಾನೂನು ಕಾಲೇಜು ಸೇರಿದಂತೆ ರಾಜ್ಯದ ಕೆಲವು ಸ್ಥಳಗಳಲ್ಲಿ ಪೊಲೀಸ್ ಭದ್ರತೆಯ ನಡುವೆ ಸರಸ್ವತಿ ಪೂಜೆಯನ್ನು ನಡೆಸಬೇಕಾಯಿತು ಎಂದು ಬಿಜೆಪಿ ಶಾಸಕರು ಮಂಡಿಸಿದ ನಿಲುವಳಿ ಸೂಚನೆಯ ಮೇಲಿನ ಚರ್ಚೆಗೆ ಸ್ಪೀಕರ್ ನಿರಾಕರಿಸಿದ್ದರು. ಹೀಗಾಗಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು' ಎಂದು ಸದನದಿಂದ ಹೊರ ಬಂದ ಪಾಲ್ ಪತ್ರಿಕ್ರಿಯಿಸಿದ್ದಾರೆ.
ಬಿಜೆಪಿ ಶಾಸಕರ ಪ್ರತಿಭಟನೆಯು ಶಾಸಕಾಂಗ ಸಂಸ್ಕೃತಿಗೆ ಹೊರತಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತೃಣಮೂಲ ಕಾಂಗ್ರೆಸ್‌ನ ಮುಖ್ಯ ಸಚೇತಕ ನಿರ್ಮಲ್ ಘೋಷ್ ಸದನದಲ್ಲಿ ಪ್ರಸ್ತಾವನೆ ಮಂಡಿಸಿದರು.