ಜೈಪುರ: ಸಾಮ್ರಾಜ್ಯಶಾಹಿತ್ವ ಮತ್ತು ಅಧಿಕಾರ ವಿಸ್ತರಣೆಯ ದಾಹಕ್ಕೆ ನಲುಗಿದ 'ಕಾಲನಿ'ಗಳ ಮತ್ತು ಸಂಕಷ್ಟಕ್ಕೆ ಒಳಗಾದ ಜನರ ಮೇಲಿನ ಕನಿಕರದ ಮಾತುಗಳು ಜೈಪುರ ಸಾಹಿತ್ಯ ಉತ್ಸವದ ಎರಡನೇ ದಿನದ ಗೋಷ್ಠಿಗಳನ್ನು ಆರ್ದ್ರಗೊಳಿಸಿದವು.
'ಸಾಮ್ರಾಜ್ಯಶಾಹಿತ್ವದ ಗಾಯಗಳು' ಎಂಬ ವಿಷಯದ ಕುರಿತ ಸಂವಾದದಲ್ಲಿ ಅಧಿಕಾರ ವಿಸ್ತರಣೆಗಾಗಿ ಪಾಶ್ಚಿಮಾತ್ಯ ದೇಶಗಳು ನಡೆಸಿದ ಕೃತ್ಯಗಳು, ಮುಖ್ಯವಾಹಿನಿಗೆ ಬಂದ ಚೀನಾ ಮತ್ತು ಐರ್ಲೆಂಡ್, ಇರಾನ್, ಟರ್ಕಿ, ಈಜಿಪ್ಟ್‌ನಲ್ಲಿ ಆದ ಪರಿಣಾಮಗಳ ಕುರಿತು ಚರ್ಚೆಯಾಯಿತು.
ಅನಿತಾ ಆನಂದ್ ಜೊತೆ ನಡೆದ ಸಂವಾದದಲ್ಲಿ 'ಫ್ರಮ್ ದ ರುಯಿನ್ಸ್ ಆಫ್ ಎಂಪಾಯರ್' ಕಾದಂಬರಿಯ ಲೇಖಕ ಪಂಕಜ್ ಮಿಶ್ರಾ ಅವರು 'ಪಾಶ್ಚಾತ್ಯ ದೇಶಗಳನ್ನು ಆಧುನಿಕ ಜಗತ್ತಿನ ವಿನ್ಯಾಸಕಾರ ಎಂದು ಹೇಳಲಾಗುತ್ತಿದೆ. ಆದರೆ ಅದರ ಹಿಂದೆ ಎಷ್ಟೊಂದು ಕ್ರೌರ್ಯ ಮತ್ತು ಜನರ ಕಣ್ಣೀರು ಇದೆ ಎಂಬುದನ್ನು ಮರೆಯಬಾರದು' ಎಂದರು.
ಸಾಮ್ರಾಜ್ಯಶಾಹಿತ್ವ ಎಂದರೆ ಹಿಂಸೆಯಲ್ಲದೆ ಬೇರೇನೂ ಅಲ್ಲ ಎಂದು ಇತಿಹಾಸ ಪ್ರಾಧ್ಯಾಪಕಿ ಜೇನ್ ಒಮಾಯರ್ ಹೇಳಿದರು.
'ಗಾಜಾದ ಆಚೆಗಿನ ವಿಶ್ವ' ಎಂಬ ಕಾದಂಬರಿಯನ್ನು ಆಧರಿಸಿ ಲಿಂಡ್ಸಿ ಹಿಲ್ಸಮ್ ಜೊತೆಗಿನ ಸಂವಾದದಲ್ಲಿ ಪಂಕಜ್ ಮಿಶ್ರಾ ಮಾತನಾಡಿ ಗಾಜಾದ ಮೇಲೆ ನಡೆಯುತ್ತಿರುವ ಕ್ರೌರ್ಯವು ಪ್ರಪಂಚದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹಿಂಸೆಗಿಂತ ಭಿನ್ನ ಎಂದರು.
ಗಾಜಾ ಪ್ರದೇಶ ಪ್ಯಾಲೆಸ್ಟೀನಿಯರಿಗೆ ಮನೆ ಇದ್ದಂತೆ. ಆದ್ದರಿಂದ ಅಲ್ಲಿಂದ ಹೋಗಿ ಎಂದು ಒತ್ತಾಯಿಸುವುದು ವಿಷಾದದ ವಿಷಯ ಎಂದು ಕಾದಂಬರಿಕಾರ ನವತೇಜ್ ಸರ್ಣ ಹೇಳಿದರು.
ಯುದ್ಧಪೀಡಿತ ಪ್ರದೇಶಗಳಲ್ಲಿ ವರದಿ ಮಾಡಿರುವ ಪತ್ರಕರ್ತೆ ಲಿನ್ಸಿ ಹಿಲ್ಸಮ್, ಇಸ್ರೇಲ್ ದಾಳಿಯಿಂದ 159 ಪ್ಯಾಲೆಸ್ಟೀನ್ ಪತ್ರಕರ್ತರು ಸಾವಿಗೀಡಾಗಿದ್ದಾರೆ ಎಂದು ನುಡಿದರು.


'ಆಹಾರ ಅಸ್ಪೃಶ್ಯತೆ'ಗೆ ಕೊರಗಬೇಡಿ ಜಾತೀಯತೆಯ ಜೊತೆಯಲ್ಲಿ ಬೆಳೆದು ಬಂದಿರುವ 'ಆಹಾರ ಅಸ್ಪೃಶ್ಯತೆ'ಗೆ ಕೊರಗುವುದು ಸರಿಯಲ್ಲ. ತಲೆತಲಾಂತರದಿಂದ ಸೇವಿಸುತ್ತ ಬಂದ ಆಹಾರ ಆಯಾ ಸಮುದಾಯದವರನ್ನು ಗಟ್ಟಿಯಾಗಿ ಉಳಿಸಿದೆ. ಆದ್ದರಿಂದ ಕೀಳು ಭಾವದಿಂದ ಆಧುನಿಕ ಶೈಲಿಯ ಆಹಾರಕ್ಕೆ ಮುಗಿಬೀಳುವುದು ಬೇಡ ಎಂದು 'ರೆಸಿಪೀಸ್ ಆಫ್ ದಲಿತ್ ಕಿಚನ್' ಪುಸ್ತಕದ ಲೇಖಕ ಮರಾಠವಾಡ ಪ್ರದೇಶದ ಶಾಹು ಪಟೋಲೆ ಹೇಳಿದರು. ದಲಿತರ ಅಡುಗೆ ಮನೆಯ ಖಾದ್ಯಗಳು ಎಂಬ ವಿಷಯದ ಕುರಿತು ಆಹಾರ ವೈವಿಧ್ಯತೆಯ ತಜ್ಞ ಪುಷ್ಪೇಶ್ ಪಂತ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ 'ಆಹಾರದಲ್ಲಿ ಅಡಗಿರುವ ಜಾತೀಯತೆಗೆ ಬ್ರಾಹ್ಮಣರನ್ನು ದೂರಬಾರದು. ನನ್ನ ಗ್ರಾಮದಲ್ಲಿ ಬ್ರಾಹ್ಮಣರೇ ಇಲ್ಲ. ಆದರೂ ಜಾತೀಯತೆ ಇದೆ. ಇರುವ ಸಮುದಾಯಗಳನ್ನೇ ಮೇಲು-ಕೀಳು ಎಂದು ವಿಂಗಡಿಸಿ ಅತ್ಯಂತ ಕೀಳು ಎಂದು ಪರಿಗಣಿಸಿದವರನ್ನು ಇತರ ಮೂರು 'ಕೀಳು' ಸಮುದಾಯದವರು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ' ಎಂದರು. 'ಮುಸ್ಲಿಮರು ಭಾರತಕ್ಕೆ ತಡವಾಗಿ ಬಂದವರು. ಆದ್ದರಿಂದ ಅವರ ಆಹಾರ ಪದ್ಧತಿಗೂ ಸ್ಥಳೀಯರ ಆಹಾರಕ್ಕೂ ತಾಳೆ ಹಾಕುವುದು ಸರಿಯಲ್ಲ. ಬೀಫ್ ತಿನ್ನುವುದನ್ನು ನಾವು ಮುಸ್ಲಿಮರಿಂದ ಕಲಿತದ್ದಲ್ಲ. ಅದು ನಮ್ಮ ಪರಂಪರಾಗತ ಆಹಾರ' ಎಂದು ಶಾಹು ಹೇಳಿದರು.