ನವದೆಹಲಿ: 2026-27ರ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸುವ ಬಗ್ಗೆ ಶಿಕ್ಷಣ ಸಚಿವಾಲಯವು ಸಂಬಂಧಪಟ್ಟ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ಹೇಳಿದ್ದಾರೆ.
'ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಸಚಿವಾಲಯವು ಶಾಲಾ ಶಿಕ್ಷಣ ಕಾರ್ಯದರ್ಶಿ, ಸಿಬಿಎಸ್‌ಇ ಅಧ್ಯಕ್ಷರು ಮತ್ತು ಇತರ ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದೆ. ಈ ಚರ್ಚೆಗಳ ಸಾರಾಂಶವನ್ನು ಸಮಾಲೋಚನೆಗಾಗಿ ಶೀಘ್ರದಲ್ಲೇ ಸಾರ್ವಜನಿಕರ ಮುಂದಿಡಲಾಗುವುದು' ಎಂದು 'ಎಕ್ಸ್' ಖಾತೆಯಲ್ಲಿ ತಿಳಿಸಿದ್ದಾರೆ.
ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್ ಮತ್ತು ಫೆಬ್ರುವರಿ- ಮಾರ್ಚ್‌ನಲ್ಲಿ ನಡೆಸುವ ಪ್ರಸ್ತಾವವನ್ನು ಸಚಿವಾಲಯವು ಮುಂದಿಟ್ಟಿದೆ. ಅಂತಿಮ ಫಲಿತಾಂಶಕ್ಕಾಗಿ ಎರಡು ಪರೀಕ್ಷೆಗಳಲ್ಲಿ ಪಡೆದ ಉತ್ತಮ ಅಂಕಗಳನ್ನು ಪರಿಗಣಿಸಲಾಗುತ್ತದೆ.