ನವದೆಹಲಿ: 'ಹೋಮಿಯೊಪಥಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರ ನೇಮಕವು ಅಕ್ರಮ' ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಹುದ್ದೆಯಿಂದ ಅವರನ್ನು ತೆಗೆದುಹಾಕಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನೇಮಕಾತಿ ಪ್ರಕ್ರಿಯೆಯು ನ್ಯಾಯಸಮ್ಮತವಾಗಿಲ್ಲ ಎಂದೂ ಹೇಳಿರುವ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಮನಮೋಹನ್ ಅವರಿದ್ದ ನ್ಯಾಯಪೀಠ, ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ವಜಾ ಮಾಡಿತು.
ಆಯೋಗದ ಅಧ್ಯಕ್ಷರಾಗಿ ಡಾ.ಅನಿಲ್ ಖುರಾನಾ ನೇಮಕವಾಗಿತ್ತು. 'ಪ್ರಕರಣದಲ್ಲಿ ಮೂರನೇ ಪ್ರತಿವಾದಿಯ ನೇಮಕಾತಿ ರದ್ದುಪಡಿಸಲಾಗಿದೆ. ಒಂದು ವಾರದಲ್ಲಿ ಅವರು ಬಾಕಿ ಜವಾಬ್ದಾರಿ ನಿಭಾಯಿಸಿ ಅಧ್ಯಕ್ಷ ಸ್ಥಾನ ತ್ಯಜಿಸಬೇಕು. ಈ ಅವಧಿಯಲ್ಲಿ ಆಡಳಿತಾತ್ಮಕ ಮತ್ತು ಹಣಕಾಸಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಬಾರದು' ಎಂದೂ ಆದೇಶಿಸಿತು.
'ಹೋಮಿಯೊಪಥಿ ರಾಷ್ಟ್ರೀಯ ಆಯೋಗದ ಕಾಯ್ದೆ 2020ರ 4ನೇ ಸೆಕ್ಷನ್ ಉಲ್ಲೇಖಿಸಿದ ಪೀಠವು, ಅಭ್ಯರ್ಥಿಗೆ ಕನಿಷ್ಠ 20 ವರ್ಷದ ಅನುಭವ ಇರಬೇಕು. ಈ ಕ್ಷೇತ್ರದಲ್ಲಿ 'ನಾಯಕ' ಆಗಿರಬೇಕು ಎಂಬ ನಿಯಮವಿದೆ. ಕಡ್ಡಾಯವಾಗಿರುವ ಅಗತ್ಯ ಅರ್ಹತೆಗಳನ್ನು ನೇಮಕಾತಿ ವೇಳೆ ಕೈಬಿಡಲಾಗದು' ಎಂದು ಪೀಠ ಸ್ಪಷ್ಟವಾಗಿ ಹೇಳಿತು.
'ಕಡ್ಡಾಯ ಅಗತ್ಯಗಳನ್ನು ಕೈಬಿಟ್ಟಿರುವುದು 'ಅತಿರೇಕದ ಕ್ರಮ'. ಹೊಸ ಅಧ್ಯಕ್ಷರ ನೇಮಿಸಲು ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು. ನೇಮಕಾತಿ ತಾರ್ಕಿಕ ಅಂತ್ಯ ಕಾಣಲಿದೆ ಎಂದು ನಂಬುತ್ತೇವೆ, ವಿಶ್ವಾಸ ಇಡುತ್ತೇವೆ' ಎಂದೂ ಹೇಳಿತು.
'ಆಯೋಗದ ಅಧ್ಯಕ್ಷರಾಗಿ ಡಾ.ಅನಿಲ್ ಖುರಾನಾ ಅವರು ಸಲ್ಲಿಸಿರುವ ಸೇವೆಯನ್ನು 'ಪರಿಗಣಿಸಿ' ಭವಿಷ್ಯದಲ್ಲಿ ಯಾವುದೇ ಸೌಲಭ್ಯವನ್ನು ಅವರಿಗೆ ಕಲ್ಪಿಸಬಾರದು' ಎಂದು ಪೀಠವು ತಾಕೀತು ಮಾಡಿತು.
ಡಾ.ಖುರಾನಾ ಅವರ ನೇಮಕಾತಿಯನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಡಾ. ಅಮರಗೌಡ ಎಲ್. ಪಾಟೀಲ್ ಅವರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.
ಜುಲೈ 4, 2025ರವರೆಗೂ ಖುರಾನಾ ಅವರ ಅಧಿಕಾರವಧಿ ಇತ್ತು. ಆಯೋಗದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದ ಡಾ. ಪಾಟೀಲ ಅವರು, 'ಖುರಾನಾ ಅಗತ್ಯ ಸೇವಾ ಅನುಭವ ಹೊಂದಿಲ್ಲ' ಎಂದು ನೇಮಕಾತಿಯನ್ನು ಪ್ರಶ್ನಿಸಿದ್ದರು.