ಲಖನೌ: ಉತ್ತರ ಪ್ರದೇಶದ ಲಖನೌನಲ್ಲಿ ಕಲ್ಯಾಣಮಂಟಪಕ್ಕೆ 'ಅಪರೂಪದ ಅತಿಥಿ'ಯಾಗಿ ಚಿರತೆಯೊಂದು ಅನಿರೀಕ್ಷಿತವಾಗಿ ನುಗ್ಗಿದೆ. ಇದರಿಂದಾಗಿ ಮದುವೆಗೆ ಬಂದಿದ್ದ ಸಂಬಂಧಿಕರು ಗಾಬರಿಗೊಂಡು, ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದರು. ಈ ಸಂದರ್ಭದಲ್ಲಿ ವಧು-ವರ ತಾಸುಗಟ್ಟಲೆ ಕಾರಿನೊಳಗೆ ಸೇರಿಕೊಂಡರು.
ಲಖನೌನ ಬುದ್ಧೇಶ್ವರ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ ಮದುವೆ ಸಮಾರಂಭ ನಡೆಯುತ್ತಿತ್ತು. ಆಗ ಮಂಟಪದ ಬ್ಯಾಂಕ್ವೆಟ್ ಹಾಲ್‌ಗೆ ಚಿರತೆ ನುಗ್ಗಿತು. ಅತಿಥಿಗಳು ಪ್ರಾಣಸಂಕಟ ಎದುರಿಸಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ, ಮಧ್ಯರಾತ್ರಿ ಸುಮಾರು 2 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಸೆರೆಹಿಡಿದರು. ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರಿಗೆ ಗಾಯವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಮುಗಿಯುವವರೆಗೆ ಪ್ರಾಣಭೀತಿಯಿಂದಾಗಿ ವಧು-ವರನ ಕಡೆಯ ಬಂಧು-ಮಿತ್ರರು ಕೂಡ ಕಾರುಗಳಲ್ಲೇ ಆಶ್ರಯ ಪಡೆಯಬೇಕಾಯಿತು ಎಂದು ಅತಿಥಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಕುರಿತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, 'ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದಿಂದ ಅರಣ್ಯ ಒತ್ತುವರಿ ಹೆಚ್ಚಾಗಿದೆ. ಇದರ ಫಲಿತಾಂಶವೇ ಈ ಘಟನೆ. ಬೀದಿ ಪ್ರಾಣಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುಳ್ಳು ಹೇಳುವ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ಚಿರತೆಯು ರಾಜ್ಯದ ರಾಜಧಾನಿಗೇ ದಾಳಿ ಇಟ್ಟು, ಸವಾಲೊಡ್ಡಿದೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಕಲ್ಯಾಣ ಮಂಟಪಕ್ಕೆ ಚಿರತೆ ಪ್ರವೇಶದಿಂದಾಗಿ ಗಾಬರಿಯಿಂದ ಓಡುತ್ತಿರುವ ವಧು ಮತ್ತು ಬಂಧು ಬಳಗದವರುಅಖಿಲೇಶ್ ಯಾದವ್ ಎಸ್‌ಪಿ ಮುಖ್ಯಸ್ಥಅರಣ್ಯ ಒತ್ತುವರಿಯಿಂದಾಗಿ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಇದು ಸಾಮಾನ್ಯ ಜನರ ಜೀವವನ್ನು ಅಪಾಯಕ್ಕೆ ದೂಡಿದೆ.