ಕೋಲ್ಕತ್ತ: ಇಲ್ಲಿಯ ಅಹಿರಿಟೊಲ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಶವ ತುಂಬಿದ್ದ ಸೂಟ್‌ಕೇಸ್ ಅನ್ನು ಹೂಗ್ಲಿ ನದಿಗೆ ಎಸೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಅಹಿರಿಟೊಲ ಘಾಟ್ ಬಳಿ ಟ್ಯಾಕ್ಸಿಯಲ್ಲಿ ಬಂದ ಇಬ್ಬರು ಮಹಿಳೆಯರು ನೀಲಿ ಬಣ್ಣದ ಸೂಟ್‌ಕೇಸ್ ಅನ್ನು ನದಿಗೆ ಎಸೆಯಲು ನೋಡುತ್ತಿದ್ದರು.
ಅದನ್ನು ಪ್ರಶ್ನಿಸಿದಾಗ ನಾಯಿಯ ಶವ ಎಂದಿದ್ದಾರೆ, ಆದರೆ ಸೂಟ್‌ಕೇಸ್ ತೆಗೆದು ನೋಡಿದಾಗ ಮಾನವನ ದೇಹದ ಭಾಗಗಳು ಪತ್ತೆಯಾಗಿವೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ' ಎಂದು ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ.
'ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ, ಸೂಟ್‌ಕೇಸ್‌ನಲ್ಲಿದ್ದ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯರ ಬಳಿ ಸ್ಥಳೀಯ ರೈಲಿನ ಟಿಕೆಟ್‌ಗಳು ದೊರೆತಿವೆ. ಮಹಿಳೆಯರನ್ನು ಕಂಡ ಸ್ಥಳೀಯರಿಂದಲೂ ಮಾಹಿತಿ ಪಡೆಯಲಾಗುತ್ತಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.