ನವದೆಹಲಿ: ಮುಕ್ತ ಮಾರುಕಟ್ಟೆ ಒಪ್ಪಂದದ ಕುರಿತಾದ ಮಾತುಕತೆಯನ್ನು ಪುನರಾರಂಭಿಸುವುದಾಗಿ ಭಾರತ ಮತ್ತು ಬ್ರಿಟನ್ ಸೋಮವಾರ ಘೋಷಿಸಿವೆ.
ದೆಹಲಿಯಲ್ಲಿ ನಡೆದ ಸಭೆಯ ಬಳಿಕ ಬ್ರಿಟನ್‌ನ ವ್ಯವಹಾರ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಮತ್ತು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಜಂಟಿ ಹೇಳಿಕೆ ನೀಡಿದ್ದಾರೆ.
ಮುಂದಿನ 10 ವರ್ಷಗಳಲ್ಲಿ ಎರಡು ದೇಶಗಳ ನಡುವಿನ ₹20 ಶತಕೋಟಿ ದ್ವಿಪಕ್ಷೀಯ ವ್ಯವಹಾರವು ದ್ವಿಗುಣಗೊಳ್ಳುವ ಅಥವಾ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಚಿವ ಪೀಯೂಷ್ ಗೋಯಲ್ ಹೇಳಿದರು.
ವಲಸೆಯು ಎಂದಿಗೂ ವ್ಯಾಪಾರದ ಭಾಗವಾಗಿಲ್ಲ. ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ಭಾರತ ಎಂದಿಗೂ ವಲಸೆಯ ಬಗ್ಗೆ ಪ್ರಸ್ತಾಪಿಸಿಲ್ಲ. ಇನ್ನು ಮುಂದೆಯೂ ಪ್ರಸ್ತಾಪಿಸುವುದಿಲ್ಲ ಎಂದು ಪೀಯೂಷ್ ಗೋಯಲ್ ಹೇಳಿದರು.
ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವನ್ನು(ಎಫ್‌ಟಿಎ) ಮುಂದುವರಿಸುವುದು ಬ್ರಿಟನ್ ಸರ್ಕಾರದ ಆದ್ಯತೆಯಾಗಿದೆ ಎಂದು ಜೊನಾಥನ್ ರೆನಾಲ್ಡ್ಸ್ ಅವರು ಹೇಳಿದ್ದಾರೆ.
ಕಳೆದ ವರ್ಷ ಎರಡು ದೇಶಗಳಲ್ಲಿನ ಸಾರ್ವತ್ರಿಕ ಚುನಾವಣೆಯಿಂದ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನರಾರಂಭಿಸಲಾಗುತ್ತದೆ ಎಂದು ಬ್ರಿಟನ್ ವಾಣಿಜ್ಯ ಮತ್ತು ವ್ಯವಹಾರ ಇಲಾಖೆ(ಡಿಬಿಟಿ) ತಿಳಿಸಿದೆ.
ಬ್ರಿಟನ್‌ನ ಹೂಡಿಕೆ ಸಚಿವ ಪೋಪಿ ಗಸ್ಟಫ್‌ಸನ್ ಅವರು ಮುಂಬೈ ಮತ್ತು ಬೆಂಗಳೂರಿನಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಡಿಬಿಟಿ ಹೇಳಿದೆ.