ಚೆನ್ನೈ: ತಮಿಳುನಾಡಿನಲ್ಲಿ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಅಗತ್ಯ ಔಷಧಿ ಪೂರೈಸುವ ಸಾವಿರಕ್ಕೂ ಹೆಚ್ಚು 'ಮುಧಲ್ವರ್ ಮರುಂಧಗಂಗಲ್' ಎಂಬ ಔಷಧಿ ಮಳಿಗೆಗಳನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ಲೋಕಾರ್ಪಣೆ ಮಾಡಿದ್ದಾರೆ.
ರಾಜ್ಯದಾದ್ಯಂತ ಜಾರಿಗೊಳಿಸಲಾದ ಈ ಯೋಜನೆಯಿಂದ ಶೇ 75 ರವರೆಗೂ ರಿಯಾಯಿತಿಯಲ್ಲಿ ಅಗತ್ಯ ಔಷಧಿ ದೊರೆಯಲಿದೆ.
ಅಷ್ಟೇ ಅಲ್ಲದೇ 1500 ಕ್ಕೂ ಹೆಚ್ಚು ಫಾರ್ಮಾ ಶಿಕ್ಷಣದ ಹಿನ್ನೆಲೆಯ ಯುವಕ-ಯುವತಿಯರಿಗೆ ಉದ್ಯೋಗ ದೊರೆಯಲಿದೆ ಎಂದು ಸಿಎಂ ಹೇಳಿದ್ದಾರೆ.
ಕೋಟ್ಯಂತರ ಜನರು ತಮ್ಮ ಗಳಿಕೆಯ ಸಾಕಷ್ಟು ಹಣವನ್ನು ಔಷಧಿಗಾಗಿಯೇ ಖರ್ಚು ಮಾಡುವುದನ್ನು ನಾವು ನೋಡಿದ್ದೇವೆ. ದುಬಾರಿ ಬೆಲೆಯ ಔಷಧಿ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ಹೀಗಾಗಿ ನಾವು ಮುಧಲ್ವರ್ ಮರುಂಧಗಂಗಲ್ ಔಷಧಿ ಮಳಿಗೆಗಳನ್ನು ತಮಿಳುನಾಡಿನಾದ್ಯಂತ ತೆರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಔಷಧ ವಿತರಕರು ಮತ್ತು ಸಹಕಾರ ಸಂಘಗಳಿಂದ ಈ ಅಂಗಡಿಗಳನ್ನು ತೆರೆಯಲಾಗಿದೆ. ಔಷಧ ವಿತರಕರಿಗೆ ಮಳಿಗೆಗಳನ್ನು ತೆರೆಯಲು ₹3 ಲಕ್ಷ ಹಾಗೂ ಸಹಕಾರ ಸಂಘಗಳಿಗೆ ₹2 ಲಕ್ಷ ಸಹಾಯಧನವನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಧಲ್ವರ್ ಮರುಂಧಗಂಗಲ್ ಔಷಧಿ ಮಳಿಗೆಗಳಿಗೆ ಅಗತ್ಯ ಔಷದಿ ಸರಬರಾಜು ಮಾಡುವುದಕ್ಕಾಗಿಯೇ ತಮಿಳುನಾಡಿನ ಎಲ್ಲ 38 ಜಿಲ್ಲೆಗಳಲ್ಲಿ ಸುಸಜ್ಜಿತ ದಾಸ್ತಾನು ಮಳಿಗೆಗಳನ್ನು ತೆರೆಯಲಾಗಿದೆ. ಮೂರು ತಿಂಗಳಿಗಾಗುವಷ್ಟು ಔಷಧಿಗಳನ್ನು ಇವುಗಳಲ್ಲಿ ಈಗಾಗಲೇ ದಾಸ್ತಾನು ಮಾಡಲಾಗಿದೆ ಎಂದು ಹೇಳಿದ್ದಾರೆ.